ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸೊಳ್ಳೆಗಳನ್ನು ಅಲಕ್ಷಿಸಿದರೆ ಪ್ರಾಣಾಂತಿಕ ಕಾಯಿಲೆಗಳು ಬರಬಹುದು. ಹಗಲು ಹೊತ್ತು ಕಚ್ಚುವ ಈಡೀಸ್ ಜಾತಿಯ ಸೊಳ್ಳೆಗಳು ಡೆಂಗಿಯಂತಹ ಕಾಯಿಲೆಗಳನ್ನು ಉಂಟುಮಾಡಬಲ್ಲವು. ಅದಕ್ಕಾಗಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಶಿರಹಟ್ಟಿ ತಾಲೂಕಾ ಆರೋಗ್ಯಾಧಿಕಾರಿ ಸುಭಾಷ್ ದಾಯಗೊಂಡ ಹೇಳಿದರು.
ಅವರು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ಗದಗ, ಲಕ್ಷ್ಮೇಶ್ವರ ತಾಲೂಕಾಡಳಿತ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಚೇರಿ ಶಿರಹಟ್ಟಿ, ಸಮುದಾಯ ಆರೋಗ್ಯ ಕೇಂದ್ರ ಲಕ್ಷ್ಮೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಹಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಡೆಂಗಿ ವಿರೋಧಿ ಮಾಸಾಚರಣೆ ಅಂಗವಾಗಿ ಶ್ರೀ ಉಮಾ ವಿದ್ಯಾಲಯ ಪುರಸಭೆಯ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾದ ತಾಲೂಕು ಮಟ್ಟದ ಶಾಲಾ ಶಿಕ್ಷಕರ ಅಡ್ವೋಕೆಶಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ ಮಾತನಾಡಿ, ಶಾಲೆಗಳಲ್ಲಿ ವಿದ್ಯಾರ್ಥಿಗಳ ಮುಖಾಂತರ ಸ್ವಚ್ಛತೆ, ಆರೋಗ್ಯ, ಮತ್ತು ನೈರ್ಮಲ್ಯದ ಕುರಿತಾಗಿ ಜಾಗೃತಿ ಮೂಡಿಸುವ ಸಂದೇಶವನ್ನು ಸಮಾಜಕ್ಕೆ ನೀಡಬೇಕಾಗಿದೆ. ನಮ್ಮ ಶಿಕ್ಷಕರು ಅದನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ತಾಲೂಕಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಎಸ್. ಹಿರೇಮಠ, ಆರೋಗ್ಯ ಶಿಕ್ಷಣಾಧಿಕಾರಿ ಜಗದೀಶ ಕೋಡಿಹಳ್ಳಿ, ಶಿಗ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಎಸ್. ಕರ್ಜಗಿ, ಸೂರಣಗಿಯ ಎಫ್.ಬಿ. ಹೂಗಾರ ಸಾಂಕ್ರಾಮಿಕ ರೋಗಗಳ ಕುರಿತು ಮಾಹಿತಿ ನೀಡಿದರು. ಉಮಾ ವಿದ್ಯಾಲಯ ಪ್ರೌಢಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ವಿ.ಡಿ. ಹುಲಬಜಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಕಾಂಬಳೆ, ಶಿರಹಟ್ಟಿ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಚ್.ಟಿ. ಬಿಜ್ಜುರ, ಲಕ್ಷ್ಮೇಶ್ವರ ಘಟಕದ ಕಾರ್ಯದರ್ಶಿ ಗಿರೀಶ ಸುಗಜಾನರ, ಹಿರಿಯ ಶಿಕ್ಷಕ ಪಿ.ಎಸ್. ಪುರಾಣಮಠ, ಇ.ಸಿ.ಓ ಉಮೇಶ ಹುಚ್ಚಯ್ಯನಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಪ್ರೌಢ ವಿಭಾಗದ ಬಿ.ಆರ್.ಪಿ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಆರ್‌ಪಿಗಳಾದ ಸತೀಶ ಬೋಮಲೆ, ಉಮೇಶ ನೇಕಾರ, ಎನ್.ಎ.ಮುಲ್ಲಾ ನಿರ್ವಹಿಸಿದರು.ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕುಗಳ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಕೀಟಶಾಸ್ತçಜ್ಞರಾದ ಅನ್ನಪೂರ್ಣೇಶ್ವರಿ ಶೆಟ್ಟರ, ಮನುಷ್ಯನ ದೇಹದಲ್ಲಿರುವ ಪ್ರೋಟೀನ್ ತಿಂದು ಬದುಕುವ ಈಡಿಸ್ ಜಾತಿಯ ಸೊಳ್ಳೆಗಳ ಕಚ್ಚುವಿಕೆಯಿಂದ ಮಾರಣಾಂತಿಕ ಡೆಂಗಿ ರೋಗ ಬರುತ್ತದೆ. ಇವುಗಳು ಸ್ವಚ್ಛ ನೀರಿನಲ್ಲಿ ತಮ್ಮ ಸಂತಾನ ಅಭಿವೃದ್ಧಿಯನ್ನು ಮಾಡುತ್ತವೆ. ಅದಕ್ಕಾಗಿ ನಮ್ಮ ಸುತ್ತಮುತ್ತಲು ಹಾಗೂ ಮನೆ, ಶಾಲೆಗಳಲ್ಲಿ ಸಂಗ್ರಹಿಸಿದ ನೀರನ್ನು ತೆರೆದಿಡಬಾರದು ಎಂದರು.