HomeGadag Newsಮಕ್ಕಳ ಸಾಹಿತ್ಯಕ್ಕೆ ಪ್ರಾಚೀನ ಇತಿಹಾಸವಿದೆ : ಡಾ. ರಾಜೇಂದ್ರ ಗಡಾದ

ಮಕ್ಕಳ ಸಾಹಿತ್ಯಕ್ಕೆ ಪ್ರಾಚೀನ ಇತಿಹಾಸವಿದೆ : ಡಾ. ರಾಜೇಂದ್ರ ಗಡಾದ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಮಕ್ಕಳ ಸಾಹಿತ್ಯಕ್ಕೆ ತುಂಬಾ ಪ್ರಾಚೀನವಾದ ಇತಿಹಾಸವಿದ್ದು, ಎಲ್ಲ ಸಾಹಿತ್ಯಗಳ ಅಡಿಗಲ್ಲು ಮಕ್ಕಳ ಸಾಹಿತ್ಯವಾಗಿದೆ. ಮಕ್ಕಳ ಸಾಹಿತ್ಯ ರಚನೆ, ಪ್ರಕಟಣೆಗೆ ಪ್ರೋತ್ಸಾಹ ನೀಡುವ ಹಾಗೂ ಉತ್ತಮ ಗುಣಮಟ್ಟದ ಸಾಹಿತ್ಯವನ್ನು ಮಕ್ಕಳಿಗೆ ನೀಡುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕಳೆದ ಒಂದು ದಶಕದಿಂದ ಮಕ್ಕಳ ಸಾಹಿತ್ಯ ಬೆಳವಣಿಗೆಯಲ್ಲಿ ಸದ್ದಿಲ್ಲದೆ ಕಾರ್ಯಗೈಯ್ಯುತ್ತಿದೆ. ಇಂದು ಎಲ್ಲೆಡೆ ಮಕ್ಕಳ ಸಾಹಿತ್ಯದ ವಾತಾವರಣ ಮೂಡಿಬರಬೇಕಾದುದ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಡಾ. ರಾಜೇಂದ್ರ ಎಸ್.ಗಡಾದ ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಗಜೇಂದ್ರಗಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ತಾಲೂಕ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಸಾಹಿತ್ಯದ ಪ್ರಸಾರದಲ್ಲಿ ಪತ್ರಿಕೆಗಳ ಮತ್ತು ಪಾಲಕರ ಪಾತ್ರ ಮಹತ್ವದ್ದಾಗಿದೆ. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಮಕ್ಕಳ ಸಾಹಿತ್ಯವು ಪ್ರಮುಖ ಪಾತ್ರ ವಹಿಸುತ್ತಿದ್ದು, ಮಕ್ಕಳ ಸಾಹಿತ್ಯವನ್ನು ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕಾಗಿದೆ ಎಂದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗಜೇಂದ್ರಗಡ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಸವರಾಜ ಕೊಟಗಿ ಮಾತನಾಡಿ, ಮಕ್ಕಳ ಸಾಹಿತ್ಯದಲ್ಲಿ ಅಭಿರುಚಿ ಬೆಳೆಸಿಕೊಂಡು ಮಕ್ಕಳ ಸಾಹಿತ್ಯಕ್ಕೆ ಕಂಕಣಬದ್ಧರಾಗಿ ದುಡಿಯುತ್ತಿರುವ ಹಿರಿಯ ಮಕ್ಕಳ ಸಾಹಿತಿ ಡಾ. ರಾಜೇಂದ್ರ ಎಸ್.ಗಡಾದ ಅವರು ಮಕ್ಕಳ ಸಾಹಿತ್ಯ ಪರಿಷತ್ತಿನ ಘಟಕವನ್ನು ಗಜೇಂದ್ರಗಡದಲ್ಲಿ ಸ್ಥಾಪಿಸಿರುವುದು ಸ್ವಾಗತಾರ್ಹವಾಗಿದೆ. ಈ ಭಾಗದಲ್ಲಿ ಮಕ್ಕಳ ಸಾಹಿತ್ಯದ ಚಿಂತನೆ ಚರ್ಚೆಗೆ ಇದು ಪೂರಕವಾಗಲಿದೆ ಎಂದರು.
ಗಜೇಂದ್ರಗಡ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಮಂಜುಳಾ ರೇವಡಿ ಮಾತನಾಡಿ, ಮಕ್ಕಳ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು, ಮಾನವೀಯ ಸಂಬಂಧಗಳು ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆ, ಸತ್ಯ, ಶಾಂತಿ ತತ್ವಗಳು ಸಾಕಷ್ಟು ಪ್ರಮಾಣದಲ್ಲಿ ಮೂಡಿಬರುವ ಅಗತ್ಯವಿದೆ ಎಂದರು.
ತಾಲೂಕಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶರಣಮ್ಮ ಅಂಗಡಿ ಮಾತನಾಡಿ, ಇಂದಿನ ಮಗು ಇಂದಿನ ನಾಗರಿಕ, ಇಂತವರನ್ನು ಬೆಳೆಸಿ ಪೋಷಿಸಿ ಪ್ರತಿಭಾವಂತರನ್ನಾಗಿ ಮಾಡುವುದೇ ಮಕ್ಕಳ ಸಾಹಿತ್ಯ ಪರಿಷತ್ತಿನ ಕೆಲಸವಾಗಿದ್ದು, ಇದಕ್ಕೆ ಸರ್ವರ ಸಹಕಾರ ಅಗತ್ಯವೆಂದರು.
ಕೀರ್ತನಾ ಜರದಾರಿ ಮತ್ತು ಮಕ್ಕಳು ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯರಾದ ಬಿ.ಟಿ. ಹೊಸಮನಿ ಸ್ವಾಗತಿಸಿದರು. ಗಜೇಂದ್ರಗಡ ತಾಲೂಕಾ ಮಕ್ಕಳ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ನಾಗರಾಜ ನಾಯಕ ಪ್ರಾಸ್ತಾವಿಕ ನುಡಿಗಳನ್ನಾಡಿ ಪರಿಷತ್ತಿನ ಚಟುವಟಿಕೆಗಳಿಗೆ ಸಹಕಾರ ಕೋರಿದರು.
ಕೊನೆಯಲ್ಲಿ ಸಹಶಿಕ್ಷಕರಾದ ವಿ.ಡಿ. ಕರಣಿ ವಂದಿಸಿದರು. ವೇದಿಕೆಯ ಮೇಲೆ ಕೊಪ್ಪಳ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ, ಎಸ್.ಎಫ್.ಐ ಮುಖಂಡರಾದ ಗಣೇಶ ರಾಠೋಡ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗನಟಿಯಾದ ಸರೋಜಮ್ಮ ಮುಂತಾದವರು ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಬಿ.ಎ. ಕೆಂಚರಡ್ಡಿ ಮಾತನಾಡಿ, ಒಂದೆಡೆ ಗ್ರಾಮೀಣ ಪ್ರದೇಶದಲ್ಲಿ ಬೆಳೆಯುವ ಮಕ್ಕಳ ಸಾಮಾಜಿಕ ವಿಭ್ರಾಂತಿ, ಮತ್ತೊಂದೆಡೆ ನಗರ ಪ್ರದೇಶದಲ್ಲಿ ಬೆಳೆಯುತ್ತಿರುವ ಪರಕೀಯ ಕ್ವಾನೆಂಟ್ ಸಾಂಸ್ಕೃತಿ ಇವುಗಳ ಮಧ್ಯೆ ಗೊಂದಲ ಏರ್ಪಟ್ಟಿದೆ. ಕನ್ನಡ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿಯು ಮಕ್ಕಳ ಸಾಹಿತ್ಯದ್ದಾಗಿದ್ದು, ಈ ನಿಟ್ಟಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಮಕ್ಕಳ ಸಾಹಿತ್ಯ ಪರಿಷತ್ತು ಶ್ರಮಿಸಲಿ ಎಂದರು.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!