ಬೆಂಗಳೂರು: ಮೈಸೂರ್ ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಬಹುಭಾಷಾ ನಟಿ ತಮನ್ನಾ ಅವರನ್ನು ಸರ್ಕಾರ ಆಯ್ಕೆ ಮಾಡಿದೆ. ನಟಿಯ ಆಯ್ಕೆ ಹಾಗೂ ಆಕೆಗೆ ನೀಡಲಾಗಿರುವ ದುಬಾರಿ ಸಂಭಾವನೆ ಕುರಿತು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ಈ ನಡೆಗೆ ಕನ್ನಡ ಚಿತ್ರರಂಗದ ಕಲಾವಿದರೂ ಬೇಸರ ಹೊರಹಾಕಿದ್ದಾರೆ. ಅಂತೆಯೇ ಹಿರಿಯ ನಟಿ ತಾರಾ ಅನುರಾಧ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮಲ್ಲಿ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅಂತಹವರು ನಂದಿನಿ ಬ್ರ್ಯಾಂಡ್‌ಗೆ ಒಂದು ರೂಪಾಯಿ ಪಡೆಯದೇ ಜಾಹೀರಾತು ಮಾಡಿಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಅದು ಖ್ಯಾತಿಯಾಗಿತ್ತು. ಇತ್ತೀಚೆಗೆ ಡಾಲಿ ಧನಂಜಯ್ ಅವರೂ ಒಂದು ರೂಪಾಯಿ ಪಡೆಯದೇ ಜಾಹೀರಾತು ಮಾಡಿದ್ರು. ಮೈಸೂರು ಸ್ಯಾಂಡಲ್ ನಮ್ಮ ರಾಜ್ಯದ್ದು, ನಮ್ಮ ರಾಜ್ಯದ ಕಲಾವಿದೆಯರಿಗೆ ಒಂದು ಅವಕಾಶ ಕೊಡಲಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತದ್ದಾಗಲಿ, ಉಚಿತವಾಗಿ ಮಾಡುವವರು ನಮ್ಮಲ್ಲಿದ್ದಾರೆ. ಈಗ ಯಾರದ್ದೋ ಮಾತು ಕೇಳಿ ಉಚ್ಚಾಟದಲ್ಲಿ ಕೊಚ್ಚಿಕೊಂಡು ಹೋಗಿದಂತಾಗಿದೆ. ಈ ಹಣದಿಂದ ರಾಜ್ಯಕ್ಕೆ, ರಾಜ್ಯದ ಜನರಿಗೆ ಸಹಾಯ ಮಾಡಬಹುದಲ್ಲವೇ ಎಂದು ನಟಿ ತಾರಾ ಹೇಳಿದ್ದಾರೆ.
ತಮ್ಮನ್ನಾ ಆಯ್ಕೆಗೆ ಅಪರಸ್ವರ ಕೇಳಿಬಂದಿರುವುದಕ್ಕೆ ಸಚಿವ ಎಂಪಿ ಪಾಟೀಲ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದು, ನಟಿ ತಮನ್ನಾ ಭಾಟಿಯಾ ಅವರನ್ನು ಬ್ರಾಂಡ್ ರಾಯಭಾರಿಯನ್ನಾಗಿ ನೇಮಿಸಿರುವುದರ ಹಿಂದೆ ಸಾಕಷ್ಟು ಅಂಶಗಳನ್ನು ಪರಿಗಣಿಸಿ, ಮಾನದಂಡಗಳನ್ನು ಅನುಸರಿಸಲಾಗಿದೆ. ಪ್ಯಾನ್ ಇಂಡಿಯಾ ಖ್ಯಾತಿ, ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ, ಯುವ ಸಮೂಹದ ಫಾಲೋವರ್ಸ್ ಒಳಗೊಂಡಂತೆ ನಾನಾ ಕೋನಗಳಲ್ಲಿ ಆಲೋಚಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.