2 ವರ್ಷ, 2 ದಿನಕ್ಕೆ ತಮನ್ನಾಗೆ ಬರೋಬ್ಬರಿ 6.20 ಕೋಟಿ ರೂ.: ಸ್ಪಷ್ಟನೆ ನೀಡಿದ ಸಚಿವ ಎಂಪಿ ಪಾಟೀಲ್

0
Spread the love

ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನ ಮೈಸೂರು ಸ್ಯಾಂಡಲ್ ಸೋಪ್  ರಾಯಭಾರಿಯಾಗಿ ಆಯ್ಕೆ ಮಾಡಿಕೊಂಡಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಆಕೆಗೆ ದುಬಾರಿ ಸಂಭಾವನೆ ನೀಡಿರುವ ಕುರಿತು ಸಾಕಷ್ಟು ತಕರಾರುಗಳು ಕೇಳಿ ಬರ್ತಿದೆ. ಎರಡು ವರ್ಷ 2 ದಿನಕ್ಕೆ ತಮ್ಮನ್ನಾ ಜೊತೆ ಬರೋಬ್ಬರಿ 6.20 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕರ್ನಾಟಕದ ಪ್ರಾಡಕ್ಟ್​ಗೆ ಕನ್ನಡ ನಟ ನಟಿಯರನ್ನೇ ಆಯ್ಕೆ ಮಾಡಬೇಕೆಂದು ಕನ್ನಡ ಪರ ಸಂಘಟನೆಗಳು ಆಗ್ರಹಿಸಿವೆ. ಈ ವಿರೋಧ ತೀವ್ರಗೊಳ್ಳುತ್ತಿದ್ದಂತೆಯೇ ಸಚಿವ ಎಂಪಿ ಪಾಟೀಲ್​, ತಮ್ಮನ್ನಾ ಅವರನ್ನ ರಾಯಭಾರಿಯನ್ನಾಗಿ ಮಾಡಿರುವುದಕ್ಕೆ ಸ್ಪಷ್ಟನೆ ನೀಡಿದ್ದಾರೆ.

Advertisement

ತಮ್ಮನ್ನಾ ಆಯ್ಕೆಗೆ ಅಪರಸ್ವರ ಕೇಳಿಬಂದಿರುವುದಕ್ಕೆ ಸಚಿವ ಎಂಪಿ ಪಾಟೀಲ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದು, ನಟಿ ತಮನ್ನಾ ಭಾಟಿಯಾ ಅವರನ್ನು ಬ್ರಾಂಡ್ ರಾಯಭಾರಿಯನ್ನಾಗಿ ನೇಮಿಸಿರುವುದರ ಹಿಂದೆ ಸಾಕಷ್ಟು ಅಂಶಗಳನ್ನು ಪರಿಗಣಿಸಿ, ಮಾನದಂಡಗಳನ್ನು ಅನುಸರಿಸಲಾಗಿದೆ. ಪ್ಯಾನ್ ಇಂಡಿಯಾ ಖ್ಯಾತಿ, ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ, ಯುವ ಸಮೂಹದ ಫಾಲೋವರ್ಸ್ ಒಳಗೊಂಡಂತೆ ನಾನಾ ಕೋನಗಳಲ್ಲಿ ಆಲೋಚಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

ನಮ್ಮ ಉತ್ಪನ್ನಗಳನ್ನು ವಿಶ್ವದೆಲ್ಲೆಡೆ ವಿಜೃಂಭಿಸುವಂತೆ ಮಾಡುವ ಕಾಯಕದಲ್ಲಿ ಇದು ಒಂದು ಭಾಗವಷ್ಟೆ. ಈ ಕಾರ್ಯವು ಕೇವಲ ಒಂದು ತಂತ್ರದ ಮೇಲೆ ಅವಲಂಬಿತವಾಗಿಲ್ಲ. ಅದಕ್ಕಾಗಿಯೇ ಕೆ.ಎಸ್.ಡಿ.ಎಲ್. ಸಂಸ್ಥೆಯಲ್ಲಿ ಸಂಪೂರ್ಣ ಹೊಸ ಆಯಾಮಗಳ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

ತಮನ್ನಾ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿಕೊಂಡಿದ್ದಕ್ಕೆ ತೀವ್ರ ಆಕ್ರೋಶ ಹೊರ ಹಾಕಿರುವ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ, ಮೈಸೂರು ಸ್ಯಾಂಡಲ್ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಕಂಪನಿಯ ಪ್ರಾಥಮಿಕ ಗ್ರಾಹಕರು ಕರ್ನಾಟಕದ ಕನ್ನಡಿಗರಾಗಿದ್ದಾರೆ. ಕನ್ನಡ ನಟಿಯರನ್ನ ಹಾಕೊಂಡ್ರೆ ಲಾಭ ಬರಲ್ವಾ. ಮೈಸೂರು ಸ್ಯಾಂಡಲ್ ಸೋಪ್ ಕಂಪನಿ ತನ್ನ ಬ್ರಾಂಡ್ ಅಂಬಾಸೆಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು 6.2 ಕೋಟಿ ರೂ. ತೆತ್ತು ನೇಮಕ ಮಾಡಿರುವುದು ಅವಿವೇಕದ, ಅಸಂಬದ್ಧ, ಅನೈತಿಕ, ಬೇಜವಾಬ್ದಾರಿಯುತ ತೀರ್ಮಾನವಾಗಿದೆ ಎಂದಿದ್ದಾರೆ.

ಇದು ಕರ್ನಾಟಕ ಸರ್ಕಾರದ ಸ್ವಾಮ್ಯದ ಕಂಪನಿ. 1916ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ್ದಾರೆ. ಈ ಕಂಪನಿಯು ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಇದರ ಪ್ರಾಥಮಿಕ ಗ್ರಾಹಕರು ಕನ್ನಡಿಗರಾಗಿದ್ದಾರೆ ಎನ್ನುವ ಕನಿಷ್ಠ ತಿಳಿವಳಿಕೆ ಈ ನೇಮಕ ಮಾಡುವಾಗ ಇರಲಿಲ್ಲವೇ? ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವುಳ್ಳ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರೇ ಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here