ಚಿತ್ರರಂಗ ಮತ್ತು ಮಾದಕ ವಸ್ತುಗಳ ನಡುವಿನ ಕಪ್ಪು ನಂಟು ಮತ್ತೊಮ್ಮೆ ಬೆಳಕಿಗೆ ಬಂದಿದೆ. ಸ್ಯಾಂಡಲ್ವುಡ್, ಬಾಲಿವುಡ್, ಟಾಲಿವುಡ್ನಲ್ಲಿ ಆಗಾಗ ಕೇಳಿಬರುವ ಡ್ರಗ್ಸ್ ಪ್ರಕರಣಗಳು ಇದೀಗ ತಮಿಳು ಚಿತ್ರರಂಗಕ್ಕೂ ತಲುಪಿದ್ದು, ನಟಿ ಮತ್ತು ಸಹಾಯಕ ನಿರ್ದೇಶಕಿ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಪೊಲೀಸ್ ಇಲಾಖೆಯ ಮಾದಕ ವಸ್ತು ನಿಯಂತ್ರಣ ವಿಭಾಗ ನಡೆಸಿದ ಕಾರ್ಯಾಚರಣೆಯಲ್ಲಿ ನಟಿ ಅಂಜು ಕೃಷ್ಣ ಹಾಗೂ ಸಹಾಯಕ ನಿರ್ದೇಶಕಿ ವಿನ್ಸಿ ನಿವೇತಾ ಬಂಧನಕ್ಕೊಳಗಾಗಿದ್ದಾರೆ. ಜಾನಿ ಚೆಲ್ಲಪ್ಪ ನೇತೃತ್ವದ ತಂಡ ಈ ಡ್ರಗ್ಸ್ ಜಾಲವನ್ನು ಭೇದಿಸಿದೆ.
ವಲಸರವಕ್ಕಂ ಪ್ರದೇಶದಲ್ಲಿ 33 ವರ್ಷದ ವಿಘ್ನೇಶ್ವರನ್ ಎಂಬಾತನನ್ನು ಬಂಧಿಸಿದ ಬಳಿಕ ಪ್ರಕರಣಕ್ಕೆ ತಿರುವು ಸಿಕ್ಕಿತು. ವಿಚಾರಣೆ ವೇಳೆ ಆತ ವೆಂಕಟೇಶ್ ಎಂಬ ವ್ಯಕ್ತಿಯಿಂದ ಡ್ರಗ್ಸ್ ಖರೀದಿಸುತ್ತಿದ್ದುದನ್ನು ಬಾಯ್ಬಿಟ್ಟಿದ್ದಾನೆ.
ಈ ಸುಳಿವು ಆಧರಿಸಿ ಪೊಲೀಸರು ಗ್ರಾಹಕರಂತೆ ವರ್ತಿಸಿ ವೆಂಕಟೇಶ್ ಅನ್ನು ಸಂಪರ್ಕಿಸಿದರು. ಡ್ರಗ್ಸ್ ಪೂರೈಕೆಗೆ ನಿಗದಿತ ಸ್ಥಳಕ್ಕೆ ಬಂದಾಗ ಆತನನ್ನು ಬಂಧಿಸಲಾಯಿತು. ಆತನಿಂದ ಮೆಥಾಫೆಟಮೈನ್, ಓಜಿ ಗಾಂಜಾ, ಗಾಂಜಾ, ಸ್ಮೋಕಿಂಗ್ ಬಾಂಗ್, ಸ್ಟ್ಯಾಂಪ್ ಹಾಗೂ ಒಂಬತ್ತು ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆತನ ಸಂಪರ್ಕಗಳ ಪರಿಶೀಲನೆ ವೇಳೆ ಇನ್ನಷ್ಟು ಹೆಸರುಗಳು ಹೊರಬಂದಿದ್ದು, ಇದರೊಂದಿಗೆ ನಟಿ ಅಂಜು ಕೃಷ್ಣ ಮತ್ತು ಸಹಾಯಕ ನಿರ್ದೇಶಕಿ ವಿನ್ಸಿ ನಿವೇತಾ ಬಂಧನಕ್ಕೆ ಒಳಗಾದರು. ಅಂಜು ಕೃಷ್ಣ ತಮಿಳಿನ ‘ವೆಲ್ಲಿಮಲೈ’ ಹಾಗೂ ಮಲಯಾಳಂನ ‘ಆರೊ’, ‘ಆಕಾಶಂ ಕದನ್’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಚಿತ್ರರಂಗದಲ್ಲಿ ಮಾದಕ ವಸ್ತು ಜಾಲ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಈ ಪ್ರಕರಣ ಮತ್ತೊಂದು ಉದಾಹರಣೆಯಾಗಿದೆ.



