ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಜನತಾ ಪಕ್ಷವು ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 27 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ಪ್ರಮುಖವಾಗಿ ಅವನಾಶಿ ಕ್ಷೇತ್ರದಿಂದ ಕೇಂದ್ರ ಸಚಿವ ಎಲ್. ಮುರುಗನ್ ಅವರನ್ನು ಕಣಕ್ಕಿಳಿಸಲಾಗಿದ್ದು, ಮೈಲಾಪುರ ಕ್ಷೇತ್ರದಿಂದ ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರಿಗೆ ಟಿಕೆಟ್ ನೀಡಲಾಗಿದೆ.
ಕೊಯಮತ್ತೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಸ್ಪರ್ಧಿಸಲಿದ್ದು, ಸತ್ತೂರು ಕ್ಷೇತ್ರದಲ್ಲಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಇದೇ ವೇಳೆ, ಮೋಡಕುರಿಚಿ ಕ್ಷೇತ್ರದಿಂದ ಕೀರ್ತಿಕಾ ಶಿವಕುಮಾರ್, ವಿಲವಂಕೋಡ್‌ನಿಂದ ಎಸ್. ವಿಜಯಧರಣಿ ಮತ್ತು ಥಳ್ಳಿ ಕ್ಷೇತ್ರದಿಂದ ನಾಗೇಶ್ ಕುಮಾರ್ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಲಾಗಿದೆ.
ಎನ್‌ಡಿಎ ಮೈತ್ರಿ ಅಡಿಯಲ್ಲಿ ನಡೆದ ಸೀಟು ಹಂಚಿಕೆಯ ಪ್ರಕಾರ, ಎಐಎಡಿಎಂಕೆ 169 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿ 27 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಜೊತೆಗೆ, ಅನ್ಬುಮಣಿ ರಾಮದಾಸ್ ನೇತೃತ್ವದ ಪಟ್ಟಾಳಿ ಮಕ್ಕಳ್ ಕಚ್ಚಿಗೆ 18 ಸ್ಥಾನಗಳು ಮತ್ತು ಟಿಟಿವಿ ದಿನಕರನ್ ಅವರ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಕ್ಕೆ 11 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.



