ಕಲಬುರಗಿ: ರಾಜ್ಯದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ನೀಡಲಾಗಿದ್ದರೂ, ಇದನ್ನೇ ದುರುಪಯೋಗ ಮಾಡಿಕೊಂಡು ಮಹಿಳಾ ಪ್ರಯಾಣಿಕರ ಚಿನ್ನಾಭರಣಗಳನ್ನು ಕದಿಯುತ್ತಿದ್ದ ಲೇಡಿ ಗ್ಯಾಂಗ್ ಇದೀಗ ಬಂಧನವಾಗಿದೆ.
ಕಲಬುರಗಿ ನಗರದಲ್ಲಿ ಮಾಂಗರವಾಡಿ ಬಡಾವಣೆಯ ಚಿಮನ್ ಕಾಂಬಳೆ, ಶಕೀಲಾಬಾಯಿ ಉಪಾಧ್ಯಾ ಮತ್ತು ಮಾಧುರಿ ಬಂಧಿತರು. ಕಳ್ಳತನವನ್ನೇ ಇವರು ವೃತ್ತಿ ಮಾಡಿಕೊಂಡಿದ್ದು, ರಾಜ್ಯ ಸರ್ಕಾರದ ಶಕ್ತಿ ಯೋಜನೆಯನ್ನ ಇದಕ್ಕಾಗಿ ಇವರು ಬಂಡವಾಳ ಮಾಡಿಕೊಂಡಿದ್ದರು. ಕಲಬುರಗಿ ನಗರದಿಂದ ಜಿಲ್ಲೆಯ ಸೇಡಂ, ಶಹಾಬಾದ್ ಸೇರಿ ಹಲವೆಡೆ ಉಚಿತ ಪ್ರಯಾಣ ಮಾಡಿ ಕಳ್ಳತನ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಬಸ್ ನಿಲ್ದಾಣಗಳಲ್ಲಿ ಓಡಾಡಿಕೊಂಡು ಚಿನ್ನಾಭರಣ ಧರಿಸಿದ್ದ ಮಹಿಳಾ ಪ್ರಯಾಣಿಕರನ್ನ ಮೊದಲು ಈ ಗ್ಯಾಂಗ್ ಗಮನಿಸುತ್ತಿತ್ತು. ಆ ಬಳಿಕ ಮಹಿಳಾ ಪ್ರಯಾಣಿಕರು ಬಸ್ ಹತ್ತುವ ವೇಳೆ ಎಂಟ್ರಿ ಕೊಡ್ತಿದ್ದ ಇವರು, ಅವರನ್ನು ಸುತ್ತುವರಿಯುತ್ತಿದ್ದರು. ಗಮನ ಬೇರೆಡೆ ಸೆಳೆದು ಚಿನ್ನದ ನೆಕ್ಲೇಸ್, ಪದಕ, ಉಂಗುರ, ಕಿವಿ ಓಲೆ, ಮಾಂಗಲ್ಯ ಸರಗಳನ್ನು ಕ್ಷಣಾರ್ಧದಲ್ಲಿ ಕಟ್ ಮಾಡಿ ಯಾರಿಗೂ ಅನುಮಾನ ಬಾರದಂತೆ ಕದ್ದು ಎಸ್ಕೇಪ್ ಆಗುತ್ತಿದ್ದರು ಎನ್ನಲಾಗಿದೆ. ಹಲವು ತಿಂಗಳಿಂದ ಮಹಿಳಾ ಪ್ರಯಾಣಿಕರ ನಿದ್ದೆಗೆಡಿಸಿದ್ದ ಈ ಮೂವರು ಸರಗಳ್ಳಿಯರನ್ನು ಕೊನೆಗೂ ಖಾಕಿ ಹೆಡೆಮುರಿ ಕಟ್ಟಿದೆ.



