ಟ್ಯಾಟೂ ಕ್ರೇಜ್ ಇಂದು ಎಲ್ಲಾ ಹದಿಹರೆಯದವರಲ್ಲಿ ಇದ್ದೇ ಇದೆ. ಟ್ಯಾಟೂ ಹಾಕಿಸಿಕೊಂಡರೆ ಅದೇನೋ ಸ್ಟೈಲಿಶ್ ಹಾಗೂ ಮಾಡರ್ನ್ ಎಂಬ ಮನೋಭಾವನೆ ಬಂದುಬಿಡುತ್ತದೆ ಎಂಬುದು ತರುಣ ತರುಣಿಯರ ಅಭಿಪ್ರಾಯ. ಹದಿಹರೆಯದವರಲ್ಲದೆ ನಡುವಯಸ್ಸಿನವರನ್ನೂ ಟ್ಯಾಟೂ ಆಕರ್ಷಿಸುತ್ತದೆ. ತಮ್ಮ ಪ್ರೀತಿಪಾತ್ರರ ಹೆಸರನ್ನು ಇಲ್ಲವೇ ಮೆಚ್ಚಿನ ದೇವರ ಹೆಸರನ್ನೊ, ಆಧ್ಯಾತ್ಮಿಕ ರಾಶಿಗಳನ್ನು ಹೀಗೆ ಟ್ಯಾಟೂಗಳನ್ನು ಇಂದು ಬಗೆ ಬಗೆಯಲ್ಲಿ ಜನರು ಬಿಡಿಸಿಕೊಳ್ಳುತ್ತಿದ್ದಾರೆ.
ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಬಹುತೇಕ ಹೆಚ್ಚಿನವರಿಗೆ ಟ್ಯಾಟೂ ಹಾಕಿಸಿಕೊಳ್ಳುವುದೆಂದರೆ ಅದೇನೋ ಕ್ರೇಜ್. ಕೆಲವರು ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿಕೊಂಡರೆ, ಕೆಲವರು ಕತ್ತಿನ ಭಾಗ ಕೈ, ತೋಳು, ಕಾಲುಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಇನ್ನೂ ಕಣ್ಣನ್ನೂ ಬಿಡದೆ ಮೈ ತುಂಬಾ ಹಚ್ಚೆ ಹಾಕಿಸಿಕೊಳ್ಳುವವರೂ ಇದ್ದಾರೆ. ನೀವು ಕೂಡಾ ಟ್ಯಾಟೂ ಪ್ರಿಯರೇ? ನಿಮಗೂ ಕೂಡಾ ಹಚ್ಚೆ ಹಾಕಿಸಿಕೊಳ್ಳುವುದೆಂದರೆ ಇಷ್ಟನಾ? ನೀವೇನಾದ್ರೂ ಹಚ್ಚೆ ಹಾಕಿಸಿಕೊಳ್ಳುವ ಯೋಜನೆಯಲ್ಲಿದ್ದರೆ, ಅಪ್ಪಿತಪ್ಪಿಯೂ ದೇಹದ ಈ ಭಾಗಗಳ ಮೇಲೆ ಹಚ್ಚೆ ಹಾಕಿಸುವಂತಹ ಸಾಹಸಕ್ಕೆ ಕೈ ಹಾಕಬೇಡಿ.
ದೇಹದ ಈ ಭಾಗಗಳ ಮೇಲೆ ಹಚ್ಚೆ ಹಾಕಿಸಬೇಡಿ:
ದೇಹದಲ್ಲಿನ ಕೆಲವೊಂದು ಸೂಕ್ಷ್ಮ ಭಾಗಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದು ತುಂಬಾನೇ ಅಪಾಯಕಾರಿ. ಹೌದು ಇದರಿಂದ ನರಗಳಿಗೆ ಹಾನಿ, ಸೋಂಕು, ಅಲರ್ಜಿಯಂತಹ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ತಪ್ಪಿಯೂ ಈ ಕೆಲವು ಭಾಗಗಳ ಮೇಲೆ ಹಚ್ಚೆ ಹಾಕಿಸಿಕೊಳ್ಳಬೇಡಿ.
ಮುಂಗೈ ಮತ್ತು ಬೆರಳುಗಳ ಮೇಲೆ:
ಹೆಚ್ಚಿನ ಜನರು ಮುಂಗೈ ಮತ್ತು ಕೈ ಬೆರೆಳುಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಲಲು ಇಷ್ಟಪಡುತ್ತಾರೆ. ಆದರೆ ಬೆರಳುಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದು ಅಪಾಯಕಾರಿ. ಮುಂಗೈ ಮತ್ತು ಬೆರಳುಗಳ ಚರ್ಮ ತುಂಬಾನೇ ತೆಳುವಾಗಿರುತ್ತದೆ. ಅಲ್ಲದೆ ಈ ಭಾಗಗಳಲ್ಲಿ ಮೂಳೆಗಳು, ನರಗಳು ಕೂಡಾ ಹೆಚ್ಚಿರುತ್ತವೆ. ಚರ್ಮ ತೀರಾ ತೆಳುವಾಗಿರುವುದರಿಂದ ಬೆರಳು ಮತ್ತು ಮುಂಗೈಗೆ ಟ್ಯಾಟೂ ಹಾಕಿಸುವಾಗ ರಕ್ತಸ್ತ್ರಾವ ಮತ್ತು ಗಾಯಗಳಾಗುವ ಸಾಧ್ಯತೆ ಇರುತ್ತದೆ.
ಮೊಣಕೈ: ನೀವು ಯಾವುದೇ ಕಾರಣಕ್ಕೂ ಮೊಣಕೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳಬಾರದು. ಏಕೆಂದರೆ ಮೊಣಕೈ ಚರ್ಮವು ತುಂಬಾನೇ ಮೃದುವಾಗಿರುತ್ತದೆ ಮತ್ತು ಎಹಚ್ಚು ಸೂಕ್ಷ್ಮವಾಗಿರುತ್ತದೆ. ಹಾಗಿರುವಾಗ ಮೊಣಕೈ ಮೇಲೆ ಸೂಜಿ ತಾಕುವುದರಿಂದ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ ಮತ್ತು ಇದು ನಂತರದಲ್ಲಿ ಚರ್ಮದ ಅಲರ್ಜಿಯನ್ನು ಸಹ ಉಂಟು ಮಾಡುವ ಸಾಧ್ಯತೆ ಇರುತ್ತದೆ.
ಕಂಕುಳಿನ ಭಾಗ: ಕಂಕುಳಿನ ಭಾಗಕ್ಕೂ ಟ್ಯಾಟೂ ಹಾಕಿಸಿಕೊಳ್ಳಬಾರದು. ಈ ಭಾಗದ ಚರ್ಮ ತುಂಬಾನೇ ಸೂಕ್ಷ್ಮವಾಗಿರುವ ಕಾರಣ ಸೂಜಿ ತಾಕಿದಾಗ ಗಾಯಗಳಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಶಾಯಿಯ ರಾಸಾಯನಿಕಗಳ ಕಾರಣದಿಂದ ಈ ಭಾಗದಲ್ಲಿ ಚರ್ಮದ ಸೋಂಕು, ಅಲರ್ಜಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಮುಖ: ಕೆಲವರು ಮುಖ, ಕಣ್ಣುಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಕಣ್ಣು ಹಾಗೂ ಮುಖದ ಚರ್ಮ ಸೂಕ್ಷ್ಮವಾಗಿರುವುದರಿಂದ ಇದು ಚರ್ಮದ ಹಾನಿ, ತುರಿಕೆ, ಅಲರ್ಜಿ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ.
ಪಕ್ಕೆಲುಬು: ಪಕ್ಕೆಲುಬು ಇರುವ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳಬಾರದು. ಇಲ್ಲಿ ಟ್ಯಾಟೂ ಹಾಕಿಸುವುದರಿಂದ ಅತಿಯಾದ ನೋವು ಉಂಟಾಗುವುದು ಮಾತ್ರವಲ್ಲದೆ, ಇದರಿಂದ ಗುಳ್ಳೆಗಳು ಉಂಟಾಗುವುದು, ತುರಿಕೆ ಇತ್ಯಾದಿ ಚರ್ಮದ ಸೋಂಕಿನ ಅಪಾಯ ಕೂಡಾ ಇದೆ.
ಇದಲ್ಲದೆ ಒಳ ತುಟಿ, ಖಾಸಗಿ ಭಾಗಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳಬಾರದು. ಇಂತಹ ಸೂಕ್ಷ್ಮ ಭಾಗಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದರಿಂದ ತುರಿಕೆ, ದದ್ದು, ಅಲರ್ಜಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.