ಬೆಂಗಳೂರು:- ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ಜಿಎಸ್‌ಟಿ ಶಾಕ್ ಕೊಟ್ಟಿರುವ ವಿಚಾರವಾಗಿ ಸಂಸದ ಬಸವರಾಜ್ ಬೊಮ್ಮಾಯಿ ಆಕ್ರೋಶ ಹೊರ ಹಾಕಿದ್ದಾರೆ.
ಈ ಬಗ್ಗೆ X ಮಾಡಿರುವ ಅವರು, ಕರ್ನಾಟಕದಲ್ಲಿ ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಸ್ಥರಿಗೆ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ ಜಿಎಸ್‌ಟಿ ಶಾಕ್ ಕೊಟ್ಟಿರುವಂಥದ್ದು ಅತ್ಯಂತ ಖಂಡನೀಯ. ಜಿಎಸ್‌ಟಿ ಕಾನೂನು ಅಡಿಯಲ್ಲಿ ವ್ಯಾಪಾರ ವಹಿವಾಟು ಮಾಡಲು ಕೆಲವು ರಿಯಾಯಿತಿ ಇದೆ. ಸಿಎಂ ಸಿದ್ದರಾಮಯ್ಯ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿ ಕೂಡಲೇ ಸಣ್ಣ ವ್ಯಾಪಾರಸ್ಥರಿಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಿಗಳ ವಿಚಾರದಲ್ಲಿ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ, ದುಡುಕಿ ಹಲವಾರು ವರ್ಷದ ತೆರಿಗೆ ಅದರ ಮೇಲೆ ಬಡ್ಡಿ ಮತ್ತು ಇತರ ಚಾರ್ಜ್ ಹಾಕಿದೆ. ಈ ಮೂಲಕ ಸಣ್ಣ ಬೀದಿಬದಿ ವ್ಯಾಪಾರಸ್ಥರ ಮೇಲೆ ದೊಡ್ಡ ಹೊರೆ ಹೊರೆಸಿ ಅವರು ವ್ಯಾಪಾರ ಮುಚ್ಚುವ ಪರಿಸ್ಥಿತಿಗೆ ತಂದಿರುವುದು ಯಾರೂ ಕೂಡ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಸಂಬಂಧಪಟ್ಟ ಸಣ್ಣ ವ್ಯಾಪಾರಿಗಳ ಪ್ರತಿನಿಧಿಗಳನ್ನು ಕರೆದು ಚರ್ಚೆ ಮಾಡಿ, ಅವರಿಗೆ ಎಲ್ಲ ರೀತಿಯ ರಿಯಾಯಿತಿಗಳನ್ನು ಕೊಟ್ಟು ಕರ ಸಮಾಧಾನ ಯೋಜನೆ ಅಡಿಯಲ್ಲಿ ಯಾವ ರೀತಿ ತೆರಿಗೆದಾರರಿಗೆ ಸಹಾಯ ಮಾಡುತ್ತೇವೊ, ಅದೇ ರೀತಿ ಅವರಿಗೂ ಸಹಾಯ ಮಾಡಬೇಕು ಎಂದು ಆಗ್ರಹಿಸಿದ್ದಾರೆ.