ಶಿಕಾರಿಪುರ:- ತಾಲ್ಲೂಕಿನ ಬಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕ ಧನಂಜಯ (51) ಅವರು ಮಂಗಳವಾರ ಶಾಲಾ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಬೆಳಿಗ್ಗೆ ಶಾಲೆಗೆ ಆಗಮಿಸಿ ಪಾಠ ಮಾಡಿದ ಬಳಿಕ ವಿರಾಮ ಸಮಯದಲ್ಲಿ ದಾಖಲೆ ಬರೆಯುವುದಾಗಿ ತಿಳಿಸಿ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿ ಬಾಗಿಲು–ಕಿಟಕಿ ಮುಚ್ಚಿಕೊಂಡಿದ್ದಾರೆ. ಬಳಿಕ ಅನುಮಾನಗೊಂಡ ಇತರೆ ಶಿಕ್ಷಕರು ಬಾಗಿಲು ತೆರೆಯಲು ಪ್ರಯತ್ನಿಸಿ ವಿಫಲರಾದರು. ಮತ್ತೊಂದು ಕಿಟಕಿಯನ್ನು ತೆರೆಯುವಾಗ ಧನಂಜಯ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ತಕ್ಷಣ ಗ್ರಾಮಸ್ಥರು ಹಾಗೂ ಶಿಕ್ಷಕರು ಸೇರಿ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಘಟನೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. ಜೀನಹಳ್ಳಿ ಗ್ರಾಮದ ಮೂಲ ನಿವಾಸಿಯಾಗಿದ್ದ ಧನಂಜಯ ಅವರು ಹೊನ್ನಾಳಿಯಲ್ಲಿ ವಾಸವಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



