ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿನ 150 ವರ್ಷಗಳ ಇತಿಹಾಸ ಹೊಂದಿರುವ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ನಂ-1ರಲ್ಲಿ 1989-90ರಿಂದ 1995-96ರಲ್ಲಿ 7ನೇ ತರಗತಿ ಕಲಿತ ವಿದ್ಯಾರ್ಥಿಗಳು ತಮಗೆ ಅಕ್ಷರ ಜ್ಞಾನ ನೀಡಿ ಬದುಕಿಗೆ ದಾರಿ ದೀಪವಾದ ಗುರುಗಳನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.
ಗೌರವ ವಂದನೆ ಸ್ವೀಕರಿಸಿ ಶಿಕ್ಷಕರಾದ ಜಿ.ಎಸ್. ಜಾವೂರ, ಎ.ಎಚ್. ಅಂಚಿ ಮಾತನಾಡಿ, ನಮ್ಮೊಳಗಿನ ಪ್ರತಿಯೊಂದು ಮಿಂಚು, ಅರಿವಿನ ಕಿಡಿ, ಹೊಸ ಹೊಳಹು ಇವೆಲ್ಲವಕ್ಕೂ ಮೂಲ ಗುರುವಿನ ಪ್ರೇರಣೆ. ಅಂಥ ಅರಿವಿನ ಬೆಳಕೇ ಜೀವಿತದುದ್ದಕ್ಕೂ ಬದುಕನ್ನು ಸರಾಗಗೊಳಿಸುತ್ತದೆ. ಸಂಕಷ್ಟಗಳನ್ನು ಜಯಿಸುವಂತೆ ಮಾಡುತ್ತದೆ. ತಲೆಯೆತ್ತಿ ಮುನ್ನಡೆಯಲು ನೆರವಾಗುತ್ತದೆ. ವ್ಯಕ್ತಿಯ ಬದುಕಿಗೆ ಸಂಸ್ಕಾರ, ಸದ್ವಿಚಾರ, ಸುಜ್ಞಾನ, ಸತ್ ಸಂಪ್ರದಾಯ, ಮಾನೀಯ ಮೌಲ್ಯಗಳನ್ನು ಬಿತ್ತಿ ಉತ್ತಮ ನಾಗರಿಕರನ್ನಾಗಿ ಮಾಡುವ ಗುರು ಸದಾ ಸ್ಮರಣೀಯ ಎಂದರು.
ಶಿಕ್ಷಕರಾದ ಆರ್.ಸಿ. ಕೋಲಕಾರ, ವೈ.ವೈ. ಬಂಡಿ, ಎಸ್.ಜಿ. ಮಾದನಬಾವಿ, ಪಾರ್ವತಮ್ಮಕೆ ಮಾತನಾಡಿ, ಗುರು-ಶಿಷ್ಯರ ಬಾಂಧವ್ಯ ಶ್ರೇಷ್ಠವಾದದ್ದು. ವಿದ್ಯಾರ್ಥಿಗಳ ಜೀವನದ ಸಾಧನೆ, ಯಶಸ್ಸು ಶಿಕ್ಷಕರಿಗೆ ಸಂತೃಪ್ತಿ ತರುತ್ತದೆ. ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಗುರುವಿನ ಕೃಪೆ ಇದ್ದೇ ಇರುತ್ತದೆ. ಹೃದಯದಲ್ಲಿ ಸದಾ ಗುರುವಿಗೆ ಜಾಗವಿರಲಿ. ಶಿಕ್ಷಕರನ್ನು ಸ್ಮರಿಸುವ, ಗೌರವಿಸುವ ಸಂಸ್ಕೃತಿ ನಶಿಸುತ್ತಿರುವ ಪತಿಸ್ಥಿತಿಯಲ್ಲೂ 28 ವರ್ಷಗಳ ಹಿಂದೆ ಕಲಿಸಿದ ಶಿಕ್ಷಕರನ್ನು ಕರೆಸಿ ಗೌರವಿಸಿ ಸನ್ಮಾನಿಸಿರುವುದು ಸಂತಸ ತಂದಿದೆ ಎಂದರು.
ವಿದ್ಯಾರ್ಥಿ ಶಿವಲಿಂಗಯ್ಯ ಹೊತಗಿಮಠ ಪ್ರಾಸ್ತಾವಿಕ ನುಡಿದರು. ಈರಮ್ಮ ದುದ್ದಗಿ ಅನಿಸಿಕೆ ವ್ಯಕ್ತಪಡಿಸಿದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಶಿರಬಡಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಡಿ.ಎನ್. ದೊಡ್ಡಮನಿ, ಬಸವರಾಜ ಗೋಡಿ, ಶಿಕ್ಷಕರಾದ ಆರ್.ಸಿ. ಕೊಷ್ಠಿ, ಕೆ.ಜಿ. ಹಿರೇಮಠ, ಡಿ.ಜೆ. ಅಂಗಡಿ, ಎಂ.ಎಫ್. ಹಾವೇರಿಮಠ, ಬಿಆರ್‌ಪಿ ಈಶ್ವರ ಮೆಡ್ಲೇರಿ, ಸತೀಶ ಬೋಮಲೆ, ಉಮೇಶ ನೇಕಾರ, ದ್ಯಾಮಣ್ಣ ಕಮತದ, ಶಂಕರ ಬ್ಯಾಡಗಿ, ಆರ್.ಬಿ. ಆಡರಕಟ್ಟಿ, ಎಸ್.ಎಸ್. ಮಹಾಲಿಂಗಶೆಟ್ಟರ, ಈ.ಎಚ್. ಪೀಟರ, ಎಸ್.ಎಂ. ಬೋಮಲೆ, ಖುದುಸಿಯಾ ನದಾಫ್ ಇದ್ದರು. ಚಂದ್ರಮತಿ ಹರಪನಹಳ್ಳಿ, ದೀಪಾ ಘೋರ್ಪಡೆ, ಶೀಲಾಕುಮಾರಿ ಕೆ, ಸತೀಶ ಉಳ್ಳಟ್ಟಿ ನಿರೂಪಿಸಿದರು.