ಶಿಕ್ಷಕರು ಸಶಕ್ತ ರಾಷ್ಟ್ರ ನಿರ್ಮಾಪಕರು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ಕಲಿಕಾ ಗುಣಾಂಶ ಇದ್ದೇ ಇರುತ್ತದೆ. ಶಿಕ್ಷಕರಾದವರು ವಿದ್ಯಾರ್ಥಿಗಳಲ್ಲಿ ಕಲಿಕಾ ಗುಣಾಂಶವನ್ನು ಹೆಚ್ಚಿಸಿ ಅವರಿಗೆ ವಿದ್ಯಾಭ್ಯಾಸದ ಜೊತೆಗೆ ಮಾನವೀಯ ಮೌಲ್ಯ ಅರಿಯಲು ಮತ್ತು ರಾಷ್ಟ್ರಾಭಿಮಾನ ಬೆಳೆಯಲು ಪೂರಕವಾದ ವಿಜ್ಞಾನ ನೀಡಿದರೆ ವಿದ್ಯಾರ್ಥಿಗಳು ಪ್ರಬುದ್ಧರಾದ ಮೇಲೆ ಸಮಾಜ, ರಾಷ್ಟ್ರಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಾರೆ. ಇದರಿಂದ ಸುಂದರ, ಸದೃಢ ರಾಷ್ಟ್ರ ನಿರ್ಮಾಣಗೊಳ್ಳಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸುವ ಶಿಕ್ಷಕರು ಸಶಕ್ತ ರಾಷ್ಟ್ರ ನಿರ್ಮಾಪಕರು ಎಂದು ಬಸವೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಕೆ. ಬಂಡಿಹಾಳ ತಿಳಿಸಿದರು.

Advertisement

ಎಸ್.ವಾಯ್.ಬಿ.ಎಂ.ಎಸ್ ಯೋಗಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಗದಗ ವತಿಯಿಂದ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ನಿವೃತ್ತರಾದ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಎಂ.ಎಸ್. ಚಳಗೇರಿ ಗುರುಗಳನ್ನು ಮತ್ತು ಯೋಗ ಪಾಠಶಾಲೆಗೆ ಯೋಗಾಭ್ಯಾಸಕ್ಕೆ ಅನುಕೂಲವಾಗುವ 25 ಯೋಗ ಮ್ಯಾಟ್ (ಜಮಖಾನೆ)ಗಳನ್ನು ದೇಣಿಗೆ ನೀಡಿದ ಗಿರಿಜಕ್ಕ ನಾಲತ್ವಾಡಮಠ ಇವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಎಂ.ಎಸ್. ಚಳಗೇರಿ ಗುರುಗಳು ಮಾತನಾಡಿ, ನಾವು ಮಕ್ಕಳಿಗೆ ಅಕ್ಷರ ಕಲಿಸುವ ಜೊತೆಗೆ ಸಾಮರ್ಥ್ಯ, ನಡಾವಳಿಕೆ, ಚಾರಿತ್ರ‍್ಯ ಶಿಸ್ತು, ಶಿಕ್ಷಣ (ವಿಜ್ಞಾನ) ಗುಣಾಂಶಗಳನ್ನು ಬೆಳೆಸಿಕೊಂಡರೆ ಆದರ್ಶ ಶಿಕ್ಷಕರು ನಾವಾಗುತ್ತೇವೆ, ಸಮಾಜ ನಮ್ಮನ್ನು ಗೌರವಿಸುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮೀ  ಆನೆಹೊಸೂರ 2023-24ನೇ ಸಾಲಿನ ಯೋಗ ಸರ್ಟಿಫಿಕೇಟ್ ಮತ್ತು ಪಿ.ಜಿ ಡಿಪ್ಲೋಮಾ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಬಿ.ಬಿ. ತೋಟಗೇರ ಶಿಕ್ಷಕರ ದಿನಾಚರಣೆ ಕುರಿತು ಅನಿಸಿಕೆ ತಿಳಿಸಿದರು. ಕಾರ್ಯಕ್ರಮದಲ್ಲಿ ಯೋಗ ಸಾಧಕರು, ಯೋಗ ಕೋರ್ಸ್ ವಿದ್ಯಾರ್ಥಿಗಳು, ಅಭಿಮಾನಿಗಳು ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಸುನಂದಾ ಜ್ಯಾನೋಪಂತರ ಪ್ರಾರ್ಥನೆ ಹೇಳಿದರು. ವಿ.ಎಂ. ಮುಂದಿನಮನಿ ಸ್ವಾಗತಿಸಿದರು. ವಿಜಯಾ ಚನ್ನಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ. ಎಂ.ವಿ. ಐಹೊಳ್ಳಿ ವಂದಿಸಿದರು. ರವಿ ಹುಡೇದ ಉಪಹಾರ ವಿತರಿಸಿದರು.

ಅಧ್ಯಕ್ಷತೆ ವಹಿಸಿದ್ದ ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲದ ಮಾತನಾಡಿ, ಶಿಕ್ಷಕರಾದವರು ಕೇವಲ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿರದೆ ಸಮಾಜದಲ್ಲಿರುವ ವಿದ್ಯಾರ್ಥಿ ಪಾಲಕರಿಗೂ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರೆ ಬಾಲಕ, ಪಾಲಕ, ಶಿಕ್ಷಕ ಇವರಲ್ಲಿರುವ ಅನೇಕ ಸವಾಲುಗಳು ದೂರಾಗುವವೆಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರು ವರ್ಷಕ್ಕೊಮ್ಮೆಯಾದರೂ ಶಿಕ್ಷಕರನ್ನು ಗೌರವಿಸಲು ಶಿಕ್ಷಕರ ದಿನಾಚರಣೆ ದಯಪಾಲಿಸಿರುವದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಅವರ ಆದರ್ಶಗಳನ್ನು ರೂಢಿಸಿಕೊಳ್ಳಬೇಕೆಂದು ಸೂಚಿಸಿದರು.


Spread the love

LEAVE A REPLY

Please enter your comment!
Please enter your name here