ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ: ವ್ಯಕ್ತಿಯ ಬದುಕಿಗೆ ಶಿಕ್ಷಣದೊಂದಿಗೆ ಸಂಸ್ಕಾರ, ಸದ್ವಿಚಾರ, ಸುಜ್ಞಾನ, ಸತ್ಸಂಪ್ರದಾಯ, ಮಾನವೀಯ ಮೌಲ್ಯಗಳನ್ನು ಬಿತ್ತಿ ಉತ್ತಮ ನಾಗರಿಕರನ್ನಾಗಿ ಮಾಡುವ ಗುರು ಸದಾ ಸ್ಮರಣೀಯ, ಅನುಕರಣೀಯರಾಗಿದ್ದು, ಹಿಂದಿನ ಗುರುಗಳ ಮೌಲ್ಯಾಧಾರಿತ ದಾರಿಯಲ್ಲಿ ಈಗಿನ ಶಿಕ್ಷಕರು ಸಾಗುವ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನ ಮಠದ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಂದ ನಡೆದ ಎಸ್.ಎಸ್. ಕೂಡ್ಲಮಠ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ದಿ. ವಿ.ಬಿ. ಸಾಲಿ ಹಾಗೂ ದಿ. ಎಚ್.ಸಿ. ರಟಗೇರಿ ಗುರುಗಳ ನುಡಿನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಎಂದಿಗೂ ಇಂದು ಶಿಕ್ಷಕರಿಗೆ ಸಾಮಾಜಿಕ ಜವಾಬ್ದಾರಿ ಹೆಚ್ಚಿದ್ದು, ಶಿಕ್ಷಕರು ತಮ್ಮ ವೃತ್ತಿ ಪ್ರಾಮಾಣಿಕತೆಯ ಆತ್ಮಾವಲೋಕನದೊಂದಿಗೆ ನಡೆಯಬೇಕು. ಶಿಕ್ಷಕರಿಗೆ ಪರಿಪೂರ್ಣ ಸ್ವಾತಂತ್ರ್ಯ ಬೇಕು. ಅಂದಾಗ ಮಾತ್ರ ಉತ್ತಮ ನಾಗರಿಕರ ಸಮಾಜ ನಿರ್ಮಾಣ ಸಾಧ್ಯ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದರೂ ನೈತಿಕ ಮೌಲ್ಯಗಳು, ಸಂಸ್ಕೃತಿಯನ್ನು ರೂಢಿಸುವ ಶಿಕ್ಷಣ ಇಂದಿನ ಅವಶ್ಯಕತೆಯಾಗಿದೆ. ಶಿಕ್ಷಕರು ಸ್ವಯಂ ವಿದ್ಯಾರ್ಥಿಗಳಾಗಿ ನಿರಂತರ ಓದು ರೂಢಿಸಿಕೊಳ್ಳಬೇಕು ಮತ್ತು ರಾಜಕಾರಣದಿಂದ ದೂರವಿದ್ದು ವೃತ್ತಿ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಭವಿಷ್ಯದಲ್ಲಿ ಸುಸಂಸ್ಕೃತ ನಾಗರಿಕರನ್ನು ರೂಪಿಸುವ ಮಹತ್ತರ ಜವಾಬ್ದಾರಿಯನ್ನು ಶಿಕ್ಷಕರು ಪ್ರಾಮಾಣಿಕವಾಗಿ ನಿಭಾಯಿಸಬೇಕು. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಬದುಕನ್ನೇ ಸಮರ್ಪಿಸಿಕೊಂಡ ಗುರುಗಳನ್ನು ಜೀವಂತವಿದ್ದಾಗಲೇ ಪ್ರೀತಿ, ಗೌರವ, ಪೂಜ್ಯನೀಯ ಭಾವದೊಂದಿಗೆ ಕಾಣಬೇಕು ಎಂದರು.
ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ನೀಲಗಿರಿ ತಳವಾರ, ವಕೀಲ ಎಸ್.ಪಿ. ಬಳಿಗಾರ, ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ರಾಗಿ ಮಾತನಾಡಿದರು. ಎಸ್.ಕೆ. ಮಾದನಳ್ಳಿ, ಶಿವಾನಂದ ರಟಗೇರಿ, ದೇವರಾಜ ಸಾಲಿ, ಪ್ರಕಾಶ ಬೆಟಗೇರಿ, ರಾಜು ಮುಳಗುಂದಮಠ, ಮಂಜುನಾಥ ನಾವಿ, ವೀರೇಶ ನೂಲ್ವಿ, ಪ್ರಕಾಶ ಹಡಪದ, ಮಹಾಂತೇಶ ಸುಣಗಾರ, ಪ್ರಕಾಶ ಹಡಪದ, ಬಸವರಾಜ ನೂಲ್ವಿ, ಉಮೇಶ ಪೂಜಾರ ಮತ್ತಿತರರು ಇದ್ದರು.
ಜಾನಪದ ವಿದ್ವಾಂಸರಾದ ಶಿಗ್ಲಿಯ ಡಾ. ಶಂಭು ಬಳಿಗಾರ ಮಾತನಾಡಿ, ಶಿಷ್ಯ ಪರಂಪರೆಗೆ ತನ್ನದೇ ಆದ ಇತಿಹಾಸವಿದೆ. ಅನೇಕ ಮಹನೀಯರ ಸಾಧನೆಯ ಹಿಂದೆ ಗುರುವಿನ ಶ್ರೀರಕ್ಷೆ ಇರುತ್ತದೆ. ಬಾಳು ಬೆಳಗಿದ ಗುರುಗಳಿಗೆ ಹೃದಯದಲ್ಲಿ ಸದಾ ಶ್ರೇಷ್ಠ ಸ್ಥಾನವಿರಲಿ. ಮಕ್ಕಳ ಶ್ರೇಯೋಭಿವೃದ್ಧಿಯಲ್ಲಿ ಪಾಲಕರ ಪಾತ್ರವೂ ಮಹತ್ವದ್ದಾಗಿದೆ. ಬಿಡುವಿಲ್ಲದ ಜೀವನಶೈಲಿಯ ನಡುವೆ ಮಕ್ಕಳಿಗಾಗಿ ಬಿಡುವು ಮಾಡಿಕೊಂಡು, ಅವರೊಳಗೆ ಸದ್ಗುಣಗಳನ್ನು ಅರಳಿಸುವ, ಕೌಟುಂಬಿಕ ಸಂಬಂಧಗಳ ಮೌಲ್ಯ ತಿಳಿಸುವ, ಸಾಮಾಜಿಕ ವ್ಯವಸ್ಥೆಯ ಸವಾಲುಗಳಿಗೆ ಎದೆಗೊಡಲು ಆತ್ಮಸ್ಥೈರ್ಯ ರೂಪಿಸುವ ಪ್ರಯತ್ನಗಳು ನಿರಂತರ ಸಾಗುತಿರಲಿ ಎಂದರು.



