ವಿಜಯಸಾಕ್ಷಿ ಸುದ್ದಿ, ರೋಣ : ಪಟ್ಟಣದಲ್ಲಿರುವ ಗುರುಭವನದ ಮೇಲ್ಮಹಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು, ಮೊದಲ ಹಂತದಲ್ಲಿ ಶಾಸಕರ ನಿಧಿಯಿಂದ 20 ಲಕ್ಷ ರೂಗಳನ್ನು ಒದಗಿಸಿಕೊಡಲಾಗುವುದು ಎಂದು ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಗುರುವಾರ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಜರುಗಿದ ಶಿಕ್ಷಕರ ದಿನಚಾರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸದ್ಯಕ್ಕೆ ಇರುವ ಗುರುಭವನ ವಿಶಾಲವಾಗಿದ್ದರೂ ಸಹ ಶಿಕ್ಷಕರ ಬೇಡಿಕೆಗೆ ಆದ್ಯತೆ ನೀಡಿ, ಮೇಲ್ಮಹಡಿ ಕಟ್ಟಡವನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಮೇಲ್ಮಹಡಿ ಕಟ್ಟಡ ಮತ್ತಷ್ಟು ವಿಶಾಲ ಹಾಗೂ ಸುಸಜ್ಜಿತವಾಗಿ ನಿರ್ಮಾಣವಾಗಲಿದ್ದು, ಅಂದಾಜು ವೆಚ್ಚ 1 ಕೋಟಿ ರೂ ಮೀರಬಹುದು. ಹೀಗಾಗಿ, ನಾನು ಶಾಸಕರಿಂದ ನಿಧಿಯಿಂದ 20 ಲಕ್ಷ ರೂಗಳನ್ನು ನೀಡುತ್ತೇನೆ ಎಂದು ಘೋಷಿಸಿದ ಅವರು, ಈ ಕಾರ್ಯದಲ್ಲಿ ಶಿಕ್ಷಕರ ಸಹಕಾರವೂ ಮುಖ್ಯವಾಗಿದೆ ಎಂದರು.
ಸೆ. 5ರಂದು ನಡೆಯುವ ಶಿಕ್ಷಕರ ದಿನಚಾರಣೆಯನ್ನು ಅದ್ದೂರಿಯಾಗಿ ಆಚರಿಸಬೇಕು. ಎಲ್ಲ ಶಿಕ್ಷಕರು ಕಡ್ಡಾಯವಾಗಿ ಭಾಗವಹಿಸಬೇಕು. ಅಲ್ಲದೆ ತಾಲೂಕಾ ಮಟ್ಟದ ಅಧಿಕಾರಿಗಳು ಸಹ ಶಿಕ್ಷಕರ ದಿನಚಾರಣೆಯಲ್ಲಿ ಭಾಗವಹಿಸಿ ಸಭೆಗೆ ಮೆರಗು ತರಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಮತ್ತು ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಬಿಇಒ ರುದ್ರಪ್ಪ ಹುರಳಿರವರಿಗೆ ಶಾಸಕ ಜಿ.ಎಸ್. ಪಾಟೀಲ ಸೂಚಿಸಿದರಲ್ಲದೆ, ಶಿಕ್ಷಕರ ಇಚ್ಛೆಯಂತೆ ಬೇರೆ ಇಲಾಖೆಯವರು ಗುರುಭವನದಲ್ಲಿ ಸಮಾರಂಭಗಳನ್ನು ನಡೆಸಿದರೆ ಆರ್ಥಿಕ ಸಹಾಯ ಮಾಡಬೇಕು. ಇದರಿಂದ ಕಟ್ಟಡದ ನಿರ್ವಹಣೆಗೆ ಕಿಂಚಿತ್ ಸಹಾಯವಾಗುತ್ತದೆ ಎಂದರು.
ಪ್ರತಿ ವರ್ಷ ಜರುಗುವ ಶಿಕ್ಷಕರ ದಿನಚಾರಣೆಯಲ್ಲಿ ಶಾಸಕ ತಮ್ಮ ತಂದೆಯವರಾದ ದಿ. ಎಸ್.ಆರ್. ಪಾಟೀಲರ ಸ್ಮರಣಾರ್ಥ ಶಿಕ್ಷಕರಿಗೆ ಬ್ಯಾಗ್‌ಗಳನ್ನು ನೀಡುವ ವಾಡಿಕೆಯಿದ್ದು, ಈ ಬಾರಿಯೂ ಸಹ ಶಿಕ್ಷಕರ ಗೌರವಾರ್ಥ ಬ್ಯಾಗ್ ವಿತರಿಸಲಾಗುವುದು ಎಂದು ಶಾಸಕರು ತಿಳಿಸಿದರು.
ತಹಸೀಲ್ದಾರ ನಾಗರಾಜ ಕೆ., ಕಿರಣಕುಮಾರ ಕುಲಕರ್ಣಿ, ಇಒ ಮಂಜುಳಾ ಹಕಾರಿ, ಗಿರೀಶ ಹೊಸುರ, ಎಸ್.ಆರ್. ದೊಡ್ಡಮನಿ, ವೈ.ಡಿ. ಗಾಣಿಗೇರ, ವಿ.ಎ. ಹಾದಿಮನಿ, ಎ.ಕೆ. ಒಂಟಿ, ಸಿ.ಕೆ. ಕೇಸರಿ ಸೇರಿದಂತೆ ಅಧಿಕಾರಿಗಳು ಹಾಗೂ ಶಿಕ್ಷಕ ವೃಣದದವರು ಉಪಸ್ಥಿತರಿದ್ದರು.
ವಿವಿಧ ಇಲಾಖೆಗಳ ಕಾರ್ಯಕ್ರಮಗಳು ಗುರುಭವನದಲ್ಲಿ ನಡೆಯುತ್ತವೆ. ಸರಕಾರಿ ಕಟ್ಟಡ, ಸರಕಾರಿ ಕಾರ್ಯಕ್ರಮವೆಂದು ಬಂದು ಕಾರ್ಯಕ್ರಮ ಮುಗಿಸಿ ಹೋದರೆ ನಿರ್ವಹಣೆ ಕಷ್ಟವಾಗುತ್ತದೆ. ಹೀಗಾಗಿ, ಆಯೋಜಕರು ಸ್ವಲ್ಪ ಮಟ್ಟಿಗೆ ಆರ್ಥಿಕ ಸಹಾಯ ಹಸ್ತ ಚಾಚಬೇಕು. ಬರಿ ಪುಗ್ಸಟ್ಟೆ ಕಾರ್ಯಕ್ರಮ ನಡೆಸುವುದು ಸರಿಯಲ್ಲ.
– ಜಿ.ಎಸ್. ಪಾಟೀಲ.
ಶಾಸಕರು.
ಗಜೇಂದ್ರಗಡ ತಾಲೂಕಿನಲ್ಲಿಯೂ ಸಹ ಗುರುಭವನ ನಿರ್ಮಿಸಬೇಕು ಎಂದು ಸಂಘದ ಅಧ್ಯಕ್ಷ ವಿ.ಎ. ಹಾದಿಮನಿ ಶಾಸಕರಿಗೆ ಮನವಿ ಮಾಡಿದರು. ಆಗ ಶಾಸಕ ಜಿ.ಎಸ್. ಪಾಟೀಲ, ಗಜೇಂದ್ರಗಡ ಪಟ್ಟಣದಲ್ಲಿಯೂ ಸಹ ಗುರುಭವನ ನಿರ್ಮಿಸುವ ಉದ್ದೇಶವಿದೆ. ಈಗಾಗಲೇ ಈ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಸಭೆಗೆ ವಿವರಿಸಿದರು.