ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಹೆರಿಗೆಗೆ ಹೋಗುವ ಶಿಕ್ಷಕಿಯರಿಗೆ 15 ದಿನ ಮುಂಚಿತವಾಗಿ ಶಿಶುಪಾಲನಾ ರಜೆ ನೀಡಬೇಕೆಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ನಡೆದ ಪ್ರಶ್ನೋತ್ತರದಲ್ಲಿ, ಶಿಕ್ಷಕರಿಗೆ ಶಿಶುಪಾಲನಾ ರಜೆ ಸರಿಯಾಗಿ ನೀಡಲಾಗುತ್ತಿಲ್ಲ ಎಂಬ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು. “ಎಲ್ಲಾ ಇಲಾಖೆಗಳಂತೆ ಶಿಕ್ಷಕಿಯರಿಗೆ ಶಿಶುಪಾಲನಾ ರಜೆ ನೀಡಲಾಗುತ್ತಿದೆ. ಹೌದು, ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ ಈ ವರ್ಷ ಡೆಪ್ಯೂಟೇಷನ್ ಇಲ್ಲ. ಆದರೆ ಮಾನವೀಯತೆಯನ್ನು ಗಮನಿಸಿ, ರಜೆಯನ್ನು ಸರಿಯಾಗಿ ಅನುಷ್ಠಾನ ಮಾಡಲಾಗುತ್ತದೆ.”
ಮುಂದೆ ಹೆರಿಗೆಗೆ ಹೋಗುವ ಶಿಕ್ಷಕಿಯರಿಗೆ 15 ದಿನ ಮುಂಚೆ ರಜೆ ನೀಡುವ ನಿಯಮ ಜಾರಿ ಮಾಡಲಾಗುತ್ತದೆ. ಡೆಲಿವರಿ ಆದ ನಂತರ ರಜೆ ಮುಗಿಸಿಕೊಂಡ ಶಿಕ್ಷಕರನ್ನು 5 ವರ್ಷ ಕಾಲ ನಿಯಮದ ಅನ್ವಯ ವರ್ಗಾವಣೆ ಮಾಡಲಾಗುವುದು. ಹೆರಿಗೆಗೆ ಹೋಗುವ ಶಿಕ್ಷಕಿಯರ ಜಾಗಕ್ಕೆ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗುತ್ತದೆ. ಜೂನ್ ಒಳಗೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದೆಂದು ಸಚಿವರು ಭರವಸೆ ನೀಡಿದ್ದಾರೆ.



