ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವಿದ್ಯಾದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ. ಸರಕಾರಿ ಶಾಲೆಯಲ್ಲಿ ಕಲಿತ, ಆರ್ಥಿಕವಾಗಿ ಸಬಲರಾದ ಹಳೆ ವಿದ್ಯಾರ್ಥಿಗಳು ಇಂದು ಆ ಶಾಲೆಗಳ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಅವರು ಭಾನುವಾರ ಪಟ್ಟಣದ ವರ್ತಕರ ಸಮುದಾಯ ಭವನದಲ್ಲಿ ಜಗದ್ಗುರು ಶ್ರೀ ಗಂಗಾಧರ ಸರಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ, ಸ್ನೇಹ ಸಮ್ಮಿಲನ, ನಿವೃತ್ತ ಯೋಧರು, ಪ್ರಗತಿಪರ ರೈತರು ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶಿಕ್ಷಕರು, ಸೈನಿಕರು, ರೈತರು ಈ ದೇಶದ ಸಂಪತ್ತಾಗಿದ್ದು, ಅವರನ್ನು ಸದಾ ಗೌರವಿಸುವ ಎಲ್ಲರ ಕರ್ತವ್ಯವಾಗಿದೆ. ಅನ್ನ ನೀಡುವ ಅನ್ನದಾತರು, ದೇಶ ಕಾಯುವ ಸೈನಿಕರು, ಅಜ್ಞಾನ-ಅಂಧಕಾರ ತೊಡೆದು ಜ್ಞಾನದ ಬೆಳಕು ಮೂಡಿಸುವ ಶಿಕ್ಷಕರು ಸದಾ ಸ್ಮರಣೀಯರು. ಈ ನಿಟ್ಟಿನಲ್ಲಿ ಈ ಶಾಲೆಯ ಹಳೆಯ ವಿದ್ಯಾಥಿಗಳು ಇವರನ್ನು ಅಭಿನಂದಿಸುವ ಕಾರ್ಯ ಮಾಡಿರುವುದು ಮಾದರಿಯಾಗಿದೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ನಿವೃತ್ತ ಮುಖ್ಯೋಪಾಧ್ಯಾಯ ಎಚ್.ಸಿ. ರಟಗೇರಿ ವಹಿಸಿದ್ದರು. ಈ ವೇಳೆ ನಿವೃತ್ತ ಶಿಕ್ಷಣ ಅಧಿಕಾರಿಗಳಾದ ಎಂ.ಎಂ. ಹವಳದ, ಆರ್.ಎನ್. ಪಂಚಬಾವಿ, ಮುಖ್ಯೋಪಾಧ್ಯಾಯ ಬಿ.ಸಿ. ಪಟ್ಟೇದ, ಎ.ಎಸ್. ತೋರಾತ, ಸಿ.ಎಸ್. ನದಾಫ್, ಸಿ.ಎಸ್. ನದಾಫ್, ಎ.ಎಸ್. ಪಾಟೀಲ, ಎಲ್.ವ್ಹಿ. ಮುದೆನೂರ, ಅಯ್.ಸಿ. ಕಣವಿ, ವ್ಹಿ.ಜಿ. ಜಾಧವ, ಎಂ.ಆರ್. ಹಿರೇಮಠ ಸೇರಿದಂತೆ ಶಾಲಾ ಶಿಕ್ಷಕರ ಸಿಬ್ಬಂದಿಗಳು, ಹಳೆಯ ವಿದ್ಯಾರ್ಥಿಗಳು, ಎಸ್‌ಡಿಎಂಸಿಯವರು ಇದ್ದರು. ಮುದಗಲ್, ಚಂದ್ರು ಮಾಗಡಿ ನಿರೂಪಿಸಿದರು.