ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿಕ್ಷಕರು ಪಾಠದ ಉದ್ದೇಶಗಳನ್ನು ಸರಿಯಾಗಿ ಅರಿತುಕೊಂಡು, ಪೂರ್ವ ತಯಾರಿಯೊಂದಿಗೆ ಲಭ್ಯವಿರುವ ಕಲಿಕೋಪಕರಣ ಹಾಗೂ ತಂತ್ರಜ್ಞಾನದ ಸಾಮಗ್ರಿ ಬಳಸಿಕೊಂಡು ಉತ್ಸಾಹದಿಂದ ಬೋಧಿಸಿದರೆ ಮಕ್ಕಳು ಕಲಿಕೆಯನ್ನು ಆನಂದದಿಂದ ಸ್ವೀಕರಿಸುತ್ತಾರೆ ಎಂದು ಸಾಹಿತಿ ಕೆ.ಎ. ಬಳಿಗೇರ ಹೇಳಿದರು.
ಅವರು ಭಾನುವಾರ ಪಟ್ಟಣದ ಬಿಸಿಎನ್ ವಿದ್ಯಾ ಸಂಸ್ಥೆ ಹಾಗೂ ರಾಷ್ಟ್ರೋತ್ತ್ಥಾನ ಪರಿಷತ್ತಿನವರು ಬಿಸಿಎನ್ ಸಭಾಭವನದಲ್ಲಿ ಆಯೋಜಿಸಿದ್ದ ಅನುದಾನರಹಿತ ಶಿಕ್ಷಕರಿಗಾಗಿ ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ಬೋಧನೆ ಎಂಬುದೋಂದು ಕಲೆ. ಈ ಕಲೆಯನ್ನು ಕರಗತ ಮಾಡಿಕೊಳ್ಳಬೇಕಾದರೆ ಶಿಕ್ಷಕರು ನಿರಂತರವಾಗಿ ಅಧ್ಯಯನಶೀಲರಾಗಿ ಸೃಜನಶೀಲರಾಗಿ ಹೊಸ ಹೊಸ ವಿಷಯಗಳನ್ನು ಕಲಿತು ಮಕ್ಕಳ ಮನಸ್ಸನ್ನು ಮುಟ್ಟುವ ರೀತಿಯಲ್ಲಿ ಬೋಧಿಸಬೇಕಾಗುತ್ತದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಸ್ಥಳೀಯ ಬಿ.ಎಡ್ ಕಾಲೇಜಿನ ಪ್ರಾಚಾರ್ಯ ರೇಣುಕಾನಂದ ಅಂಗಡಿ ಮಾತನಾಡಿ, ಮಕ್ಕಳ ಕಲಿವಿನ ಸಾಮರ್ಥ್ಯವನ್ನು ಅರ್ಥೈಸಿಕೊಂಡು ಅದಕ್ಕೆ ತಕ್ಕಂತೆ ಕಲಿಕಾ ವಾತಾವರಣ ನಿರ್ಮಾಣ ಮಾಡಿಕೊಂಡು ಬೋಧಿಸಬೇಕು ಎಂದರು.
ಅಧ್ಯಕ್ಷತೆಯನ್ನು ಲೋಹಿತ್ ನೆಲವಿಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ.ಸಾ.ಪ ಅಧ್ಯಕ್ಷ ಈಶ್ವರ ಮೆಡ್ಲೇರಿ, ನಾಗರಾಜ ಕುಲಕರ್ಣಿ, ಜಿಲ್ಲಾ ಸಂಚಾಲಕ ಚಂದ್ರು ಕುಂದಗೋಳ, ಪ್ರಾಚಾರ್ಯ ಮಂಜುನಾಥ ಬಂಡಿವಾಡ ಇದ್ದರು.


