ರೋಚಕ ಹೋರಾಟಕ್ಕೆ ಸಾಕ್ಷಿಯಾದ ಸೆಮಿಫೈನಲ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 7 ರನ್‌ಗಳ ತ್ರಿಲ್ಲಿಂಗ್ ಜಯ ಸಾಧಿಸಿ ಟಿ20 ವಿಶ್ವಕಪ್ ಫೈನಲ್‌ಗೆ ಭರ್ಜರಿ ಪ್ರವೇಶ ಮಾಡಿದೆ.
ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್, ಅಕ್ಷರ್ ಪಟೇಲ್ ಅವರ ಅದ್ಭುತ ಕ್ಯಾಚ್‌ಗಳು ಹಾಗೂ ಜಸ್ಪ್ರೀತ್ ಬುಮ್ರಾ ಅವರ ಕೊನೆಯ ಓವರ್‌ಗಳ ನಿಯಂತ್ರಿತ ಬೌಲಿಂಗ್ ಭಾರತಕ್ಕೆ ಜಯ ತಂದುಕೊಟ್ಟವು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿತು. ಈ ಭಾರೀ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಬೆಥೆಲ್ ಅವರ ಸ್ಫೋಟಕ ಶತಕದ ಹೊರತಾಗಿಯೂ 7 ವಿಕೆಟ್‌ಗೆ 246 ರನ್ ಗಳಿಸಿ ಸೋಲಿಗೆ ತುತ್ತಾಯಿತು.
ಕೊನೆಯ ಮೂರು ಓವರ್‌ಗಳಲ್ಲಿ 45 ರನ್ ಅಗತ್ಯವಿದ್ದಾಗ ಬುಮ್ರಾ 18ನೇ ಓವರ್‌ನಲ್ಲಿ ಕೇವಲ 6 ರನ್ ನೀಡಿ ಪಂದ್ಯವನ್ನು ಭಾರತ ಪರ ತಿರುಗಿಸಿದರು. ನಂತರ ಹಾರ್ದಿಕ್ ಪಾಂಡ್ಯ 19ನೇ ಓವರ್‌ನಲ್ಲಿ 9 ರನ್ ನೀಡಿ ಸ್ಯಾಮ್ ಕರ್ರನ್ ವಿಕೆಟ್ ಪಡೆದರು. ಬೌಂಡರಿ ಗೆರೆಯಲ್ಲಿ ತಿಲಕ್ ವರ್ಮಾ ಹಿಡಿದ ಅದ್ಭುತ ಕ್ಯಾಚ್ ಪಂದ್ಯಕ್ಕೆ ಮತ್ತಷ್ಟು ರೋಚಕತೆ ತಂದಿತು. ಅಂತಿಮ ಓವರ್‌ನಲ್ಲಿ ಶಿವಂ ದುಬೆ ಬೌಲಿಂಗ್ ಮಾಡುತ್ತಿದ್ದಾಗ ಬೆಥೆಲ್ 105 ರನ್ (48 ಎಸೆತ, 8 ಬೌಂಡರಿ, 7 ಸಿಕ್ಸ್) ಹೊಡೆದು ರನ್ ಔಟ್ ಆಗಿದ್ದು ಇಂಗ್ಲೆಂಡ್ ಗೆ ದೊಡ್ಡ ಹೊಡೆತವಾಯಿತು.
ಕೊನೆಯಲ್ಲಿ ಜೋಫ್ರಾ ಅರ್ಚರ್ ಮೂರು ಸಿಕ್ಸ್ ಹೊಡೆದರೂ ಭಾರತ 7 ರನ್‌ಗಳಿಂದ ಗೆದ್ದು ಫೈನಲ್ ಪ್ರವೇಶಿಸಿತು. ಅಕ್ಷರ್ ಪಟೇಲ್ ಫಿಲ್ ಸಾಲ್ಟ್, ಹ್ಯಾರಿ ಬ್ರೂಕ್ ಮತ್ತು ವಿಲ್ ಜಾಕ್ಸ್ ಅವರ ಪ್ರಮುಖ ಕ್ಯಾಚ್‌ಗಳನ್ನು ಹಿಡಿದು ಪಂದ್ಯದಲ್ಲಿ ಮಹತ್ವದ ಪಾತ್ರವಹಿಸಿದರು. ಫೈನಲ್ ಪಂದ್ಯ ಭಾನುವಾರ ಅಹಮದಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ.



