ಕಳೆದ ಮೂರು ವರ್ಷಗಳಲ್ಲಿ ಐಸಿಸಿ ಟೂರ್ನಿಗಳಲ್ಲಿ ಸತತ ಯಶಸ್ಸು ಸಾಧಿಸಿರುವ ಟೀಂ ಇಂಡಿಯಾ ಇದೀಗ 2027ರ ಏಕದಿನ ವಿಶ್ವಕಪ್‌ಗೆ ಕಣ್ಣಿಟ್ಟಿದ್ದು, ಬಿಸಿಸಿಐ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ.
2024ರಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ, 2025ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಅದಾದ ಬಳಿಕ 2026ರಲ್ಲಿ ಮತ್ತೊಮ್ಮೆ ಟಿ20 ವಿಶ್ವಕಪ್ ಜಯಿಸಿ ಐಸಿಸಿ ಟ್ರೋಫಿಗಳಲ್ಲಿ ಹ್ಯಾಟ್ರಿಕ್ ಸಾಧಿಸಿದೆ. ಇದೀಗ ಮುಂದಿನ ಗುರಿಯಾಗಿ 2027ರ ಏಕದಿನ ವಿಶ್ವಕಪ್‌ನ್ನು ಗೆಲ್ಲುವತ್ತ ಗಮನ ಹರಿಸಲಾಗಿದೆ.
2027ರ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯಲಿದೆ. 2023ರ ಫೈನಲ್‌ನಲ್ಲಿ ಸೋತಿದ್ದ ಟೀಂ ಇಂಡಿಯಾ ಈ ಬಾರಿ ಟ್ರೋಫಿ ಗೆಲ್ಲುವ ದೃಢನಿಶ್ಚಯ ಹೊಂದಿದೆ.
ಈ ಹಿನ್ನೆಲೆ ಬಿಸಿಸಿಐ ಈಗಾಗಲೇ 20 ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿದೆ ಎಂದು ವರದಿಯಾಗಿದೆ. ಆಯ್ಕೆ ಮಂಡಳಿ ಈ ಆಟಗಾರರ ಪ್ರದರ್ಶನದ ಮೇಲೆ ಮಾತ್ರ ಗಮನ ಹರಿಸಲಿದ್ದು, ಐಪಿಎಲ್ ಸೇರಿದಂತೆ ವಿವಿಧ ಟೂರ್ನಿಗಳಲ್ಲಿ ಅವರ ಆಟವನ್ನು ನಿಕಟವಾಗಿ ಅವಲೋಕಿಸಲಿದೆ.
ಐಪಿಎಲ್ ನಡೆಯುವ ವೇಳೆ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ನೇತೃತ್ವದ ತಂಡದ ಸದಸ್ಯರಾದ ಶಿವಸುಂದರ್ ದಾಸ್, ಆರ್.ಪಿ. ಸಿಂಗ್, ಅಜಯ್ ರಾತ್ರ ಮತ್ತು ಪ್ರಗ್ಯಾನ್ ಓಜಾ ವಿವಿಧ ನಗರಗಳಲ್ಲಿ ನಡೆಯುವ ಪಂದ್ಯಗಳನ್ನು ವೀಕ್ಷಿಸಲಿದ್ದಾರೆ. ಪ್ರತಿ ಆಯ್ಕೆದಾರರು ವಾರಕ್ಕೆ ಕನಿಷ್ಠ ಒಂದು ಪಂದ್ಯ ವೀಕ್ಷಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಮುಂಬೈ, ಕೊಲ್ಕತ್ತಾ, ದೆಹಲಿ, ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ನಡೆಯುವ ಪಂದ್ಯಗಳಲ್ಲಿ ಆಯ್ಕೆದಾರರು ಹಾಜರಿದ್ದು ಆಟಗಾರರ ಪ್ರದರ್ಶನವನ್ನು ಸೂಕ್ಷ್ಮವಾಗಿ ಪರಿಶೀಲಿಸಲಿದ್ದಾರೆ.
ಇದರ ಜೊತೆಗೆ 2028ರ ಟಿ20 ವಿಶ್ವಕಪ್ ಹಾಗೂ ಒಲಿಂಪಿಕ್ ಕ್ರೀಡಾಕೂಟವನ್ನು ಗಮನದಲ್ಲಿಟ್ಟುಕೊಂಡು ಈ ಪಟ್ಟಿಯನ್ನು ರೂಪಿಸಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಈಗಾಗಲೇ ಆಯ್ಕೆಯಾದ 20 ಆಟಗಾರರ ಹೊರತಾಗಿ ಇತರರಿಗೆ ವಿಶ್ವಕಪ್ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.



