ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀಮತಿ ಕಮಲಾ ಶ್ರೀ ವೆಂಕಪ್ಪ ಎಂ. ಅಗಡಿ ಇಂಜಿನಿಯರಿಂಗ್ ಕಾಲೇಜಿನ 22ನೇ ವರ್ಷದ ಸಂಸ್ಥಾಪನಾ ದಿನಾಚರಣೆ ನ.16ರಂದು ಬೆಳಿಗ್ಗೆ 11ಕ್ಕೆ ಕಾಲೇಜಿನ ಆವರಣದಲ್ಲಿ ಜರುಗಲಿದೆ ಎಂದು ಪ್ರಾಚಾರ್ಯ ಡಾ. ಪರಶುರಾಮ ಬಾರಕಿ ತಿಳಿಸಿದರು.
ಅವರು ಬುಧವಾರ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಮೂಲತಃ ಲಕ್ಷ್ಮೇಶ್ವರದವರೇ ಆದ ದಿ. ವೆಂಕಪ್ಪ ಅಗಡಿ ಅವರು ಗ್ರಾಮೀಣ ಭಾಗದ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಉನ್ನತ ಗುಣಮಟ್ಟದ ತಾಂತ್ರಿಕ, ವಿಜ್ಞಾನ ಶಿಕ್ಷಣ ಸಿಗಬೇಕೆಂಬ ಉದ್ದೇಶ ಮತ್ತು ಹುಟ್ಟಿದೂರಿನ ಅಭಿಮಾನದಿಂದ 2003ರಲ್ಲಿ ಪಟ್ಟಣದಲ್ಲಿ ಶ್ರೀಮತಿ ಕಮಲಾ ಶ್ರೀ ವೆಂಕಪ್ಪ ಎಂ. ಅಗಡಿ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು. ಕಾಲೇಜಿನಲ್ಲಿ ಪಿಯುಸಿ ಮತ್ತು ವಿವಿಧ ಇಂಜಿನಿಯರಿಂಗ್ ವಿಭಾಗಗಳಲ್ಲಿ ಒಟ್ಟು 2 ಸಾವಿರ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ.
ಉತ್ತಮ ಕಲಿಕಾ ವಾತಾವರಣ, ಮಹಾನಗರಗಳಲ್ಲಿ ಸಿಗುವ ಎಲ್ಲ ಸೌಲಭ್ಯಗಳೊಂದಿಗೆ ಕಾಲೇಜಿನಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ಶಿಕ್ಷಣ ಕೊಡಲಾಗುತ್ತಿದೆ. ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿಯಿಂದ ಪ್ರತಿವರ್ಷ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 20 ಲಕ್ಷ ರೂಗಳ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ದೇಶ-ವಿದೇಶಗಳ ಪ್ರತಿಷ್ಠಿತ ಕಂಪನಿಗಳು ಮತ್ತು ಸಂಸ್ಥೆಗಳ ವತಿಯಿಂದ 1 ಕೋಟಿ ರೂಗಳಿಗೂ ಅಧಿಕ ಠೇವಣಿ ಹಣದಲ್ಲಿ ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂಗಳ ಸ್ಕಾಲರ್‌ಶಿಪ್ ನೀಡಲಾಗುತ್ತಿದೆ. ಈ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸುತ್ತಿದ್ದಂತೆಯೇ ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ 4 ರಿಂದ 6 ಲಕ್ಷ ರೂವರೆಗಿನ ವಾರ್ಷಿಕ ವೇತನದೊಂದಿಗೆ ಉದ್ಯೋಗಕ್ಕೆ ಸೇರಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪಿಯು ಕಾಲೇಜ್ ಪ್ರಾಚಾರ್ಯೆ ಶುಭಾ ಡಿ, ಆಡಳಿತಾಧಿಕಾರಿ ಪ್ರೊ. ವಿಕ್ರಮ ಶಿರೋಳ, ಪ್ರೊ. ಆರ್.ಎಂ. ಪಾಟೀಲ, ಡಾ. ಸುಭಾಸ್ ಮೇಟಿ, ರವಿ ಪ್ರಕಾಶ, ಪ್ರೊ. ಸೋಮಶೇಖರ ಕೆರಿಮನಿ, ಪ್ರೊ. ಎಸ್.ಎಫ್. ಕೊಡ್ಲಿ ಹಾಜರಿದ್ದರು.
ಸಂಸ್ಥಾಪನಾ ದಿನಾಚರಣೆಗೆ ಮುಖ್ಯ ಅತಿಥಿಗಳಾಗಿ ಯುಎಸ್‌ಎನ ಗೋಕರೆ ಕಾನೂನು ಸಂಸ್ಥೆ ಮತ್ತು ಗೋಕರೆ ಎಲ್‌ಪಿಓ ಪ್ರೈ.ಲಿಮಿಟೆಡ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಪಾಲುದಾರರಾದ ಮಂಜುನಾಥ ಗೋಕರೆ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಮೇರಿಕಾದಲ್ಲಿರುವ ಸಂಸ್ಥೆಯ ಅಧ್ಯಕ್ಷ ಹರ್ಷವರ್ಧನ ಅಗಡಿ ವಹಿಸುವರು. ಉಪಾಧ್ಯಕ್ಷೆ ಗೀತಾ ಅಗಡಿ ಮತ್ತು ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ಪಾಲಕರು, ಗೌರವಾನ್ವಿತರು ಉಪಸ್ಥಿತರಿರುವರು. ಈ ವೇಳೆ ಝೋರಿಯೆಂಟ್ ಲ್ಯಾಬ್ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಂದ ಪ್ರೊಜೆಕ್ಟ್‌ಗಳ ಪ್ರದರ್ಶನ ನಡೆಯಲಿದೆ ಎಂದು ಡಾ. ಪರಶುರಾಮ ಬಾರಕಿ ತಿಳಿಸಿದರು.


