ಬೆಂಗಳೂರು:- ತಾಂತ್ರಿಕ ಸಮಸ್ಯೆ ಹಿನ್ನೆಲೆ ನಗರದ ವೈಟ್ಫೀಲ್ಡ್ ನಿಲ್ದಾಣದಲ್ಲಿ ಮೆಟ್ರೋ ಸಂಚಾರ ಸ್ಥಗಿತ ಮಾಡಲಾಗಿದೆ. ಬೆಳಗ್ಗೆ 5 ಗಂಟೆಯಿಂದಲೇ ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಿದೆ. ವೈಟ್ಫೀಲ್ಡ್ ಮೆಟ್ರೋ ನಿಲ್ದಾಣದಲ್ಲಿ ಮಾತ್ರ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಉಳಿದ ಮೆಟ್ರೋ ನಿಲ್ದಾಣಗಳಿಂದ ಎಂದಿನಂತೆ ರೈಲುಗಳು ಸಂಚಾರ ಮಾಡುತ್ತಿದೆ.
ಈ ಬಗ್ಗೆ ಬಿಎಂಆರ್ಸಿಎಲ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಮೆಟ್ರೋ ಸ್ಟೇಷನ್ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ಈ ನಿಲ್ದಾಣದಿಂದ ರೈಲುಗಳ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ನೇರಳೆ ಮಾರ್ಗದ ಹೋಪ್ಫಾರ್ಮ್ ಚನ್ನಸಂದ್ರ ನಿಲ್ದಾಣ ಮತ್ತು ಚಲ್ಲಘಟ್ಟ ನಿಲ್ದಾಣಗಳ ನಡುವೆ ಮಾತ್ರ ರೈಲುಗಳು ಕಾರ್ಯನಿರ್ವಹಿಸಲಿವೆ. ಹಸಿರು ಮಾರ್ಗದಲ್ಲಿ ಸಾಮಾನ್ಯ ಸೇವೆಗಳು ಮುಂದುವರಿಯುತ್ತವೆ. ಪ್ರಯಾಣಿಕರಿಗೆ ಇದರಿಂದಾಗುವ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ಬಿಎಂಆರ್ಸಿಎಲ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.



