ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮೂಲತಃ ಲಕ್ಷ್ಮೇಶ್ವರದವರಾಗಿದ್ದು, ಸದ್ಯ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಮಪ್ಪ ಗದ್ದಿ ಅವರ ಪುತ್ರಿ ತೇಜೋಮಯಿ ಗದ್ದಿ ಭರತನಾಟ್ಯದಲ್ಲಿ `ನ್ಯಾಷನಲ್ ಐಕಾನ್ ಅವಾರ್ಡ್-2025’ ಪ್ರಶಸ್ತಿಗೆ ಭಾಜನಳಾಗಿದ್ದಾಳೆ.
ಕರ್ನಾಟಕ ರಾಜ್ಯ ಸರಕಾರಿ ಹಾಗೂ ಅರೆ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಇವರಿಂದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣನವರ ಹಾಗೂ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಧಾರವಾಡದ ಕನ್ನಡ ಸಾಂಸ್ಕೃತಿಕ ಇಲಾಖೆ ಕರ್ನಾಟಕ ಕುಲ ಪುರೋಹಿತ ಆಲೂರ ವೆಂಕಟರಾಯರ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕನ್ನಡ ನಾಡು-ನುಡಿ, ನೃತ್ಯ, ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಟ್ಟಣದ ಭರತನಾಟ್ಯ ಕಲಾವಿದೆ ಬಾಲಕಿ ತೇಜೋಮಯಿ ಗದ್ದಿ ಇವಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈಗಾಗಲೇ ತನ್ನ ಪ್ರತಿಭೆಯ ಮೂಲಕ ಹಲವಾರು ಪ್ರಶಸ್ತಿಗಳನ್ನು ಗಳಿಸಿರುವ ಈ ಬಾಲೆ ಇದೀಗ ಮತ್ತೊಂದು ಪ್ರಶಸ್ತಿಗೆ ಪಾತ್ರಳಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.


