ಬೆಂಗಳೂರು: ಬೆಂಗಳೂರಿನ ಅಭಿವೃದ್ಧಿಗೆ ಎಷ್ಟು ಸಾವಿರ ಕೋಟಿ ಅನುದಾನ ಕೊಡಲಾಗಿದೆ ಎಂಬುದನ್ನು ಹೇಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ. ಸಿಲ್ಕ್ ಬೋರ್ಡ್‌ನ ಮಳೆ ಹಾನಿ ಪ್ರದೇಶಗಳಿಗೆ ಬಿಜೆಪಿ ನಿಯೋಗ ಮಂಗಳವಾರ ಭೇಟಿ ನೀಡಿ, ಮಳೆ ಹಾನಿಗೆ ಕಾರಣ, ಆಗಿರುವ ಹಾನಿ ಕುರಿತು ಪರಿಶೀಲನೆ ನಡೆಸಿ ಮಾತನಾಡಿದ ಅವರು,
ಕೆಲವೇ ಕೆಲವು ಗಂಟೆ ಮಳೆ ಬಂದ ಸಂದರ್ಭದಲ್ಲಿ ಇಡೀ ಬೆಂಗಳೂರು ಮಹಾನಗರವು ಜಲಾವೃತವಾಗಿದೆ. ನಾಲ್ಕು ಜನರು ಪ್ರಾಣ ಕಳದುಕೊಂಡಿದ್ದಾರೆ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಗ್ರೇಟರ್ ಬೆಂಗಳೂರು ಬಗ್ಗೆ ಮಾತನಾಡುತ್ತಾರೆ. ಬೆಂಗಳೂರಿಗೆ ಕೇವಲ ಗ್ರೇಟರ್ ಹೆಸರು ಸೇರಿಸಿದರೆ ಸಾಕಾಗುವುದಿಲ್ಲ ಸ್ವಾಮೀ, ಬೆಂಗಳೂರಿನ ಅಭಿವೃದ್ಧಿಗೆ ಎಷ್ಟು ಸಾವಿರ ಕೋಟಿ ಅನುದಾನ ಕೊಡಲಾಗಿದೆ ಎಂಬುದನ್ನು ಹೇಳಿ ಎಂದು ಪ್ರಶ್ನಿಸಿದರು.
ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಸಾವಿರಾರು ಕೋಟಿ ಅನುದಾನದಲ್ಲಿ ಅನೇಕ ಕಾಮಗಾರಿಗಳು ನಡೆಯುತ್ತಿತ್ತು. ಆ ಗುತ್ತಿಗೆದಾರರಿಗೆ ಹಣ ಪಾವತಿಸದ ಕಾರಣ ಇವತ್ತು ಕೆಲಸ ಕಾರ್ಯಗಳು, ಅಭಿವೃದ್ಧಿ ಕಾಮಗಾರಿಗಳು ಹಾಗೇ ನಿಂತಿವೆ ಎಂದರು.