ಶಿವಮೊಗ್ಗ:- ಕುರ್ಚಿ ಕದನಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದು, ಅಧಿವೇಶನದ ಬಳಿಕ ಕಿತ್ತಾಟ ಮುಂದುವರಿಯಲಿದೆ ಎಂದು ಬಿ.ವೈ ರಾಘವೇಂದ್ರ ವ್ಯಂಗ್ಯವಾಡಿದರು.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಿಎಂ ಕುರ್ಚಿ ಕಿತ್ತಾಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದು, ಹೃದಯಾಘಾತಕ್ಕೆ ಸ್ಟಂಟ್ ಹಾಕಿ ಜೀವ ಉಳಿಸಿದ್ದಾರೆ. ಅಧಿವೇಶನದ ಬಳಿಕ ಈ ಕಿತ್ತಾಟ ಮುಂದುವರಿಯಲಿದೆ ಎಂದಿದ್ದಾರೆ. ಒಂದು ತಿಂಗಳಿನಿಂದ ಸಿಎಂ ಕುರ್ಚಿ ನಾಟಕ ನಡೆಯಿತು. ಈಗ ಇಬ್ಬರು ಒಟ್ಟಿಗೆ ಪ್ರೆಸ್ ಮೀಟ್ ಮಾಡಿ, ಮಾಧ್ಯಮವನ್ನು ಮೊದಲನೇ ಆರೋಪಿ ಮಾಡಿದ್ದಾರೆ. ನಂತರ ವಿಪಕ್ಷವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಸರ್ಕಾರ ಮಾಡಿರುವ ತಪ್ಪನ್ನು ಈಗ ಮಾಧ್ಯಮ ಮತ್ತು ವಿಪಕ್ಷಗಳ ಮೇಲೆ ಹಾಕುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕುರ್ಚಿ ಕದನದಿಂದ ಸರ್ಕಾರದಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಎಲ್ಲರೂ ಅಭದ್ರತೆ ಮತ್ತು ಗೊಂದಲದಲ್ಲಿದ್ದಾರೆ. ಇದರಿಂದ ರಾಜ್ಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೆಕ್ಕೆಜೋಳದ ಖರೀದಿ ಮಾಡಲು ವಿಳಂಬವಾಗಿದೆ. ರೈತರು ಕಡಿಮೆ ಬೆಲೆಗೆ ಬೆಳೆ ಮಾರಾಟ ಮಾಡಿದ್ದಾರೆ. ಈಗ ಸಿಎಂ ಮತ್ತು ಡಿಸಿಎಂ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.



