ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಗಗನಮುಖಿಯಾಗಿದ್ದ ಚಿನ್ನದ ಬೆಲೆಗೆ ಇಂದು ಬ್ರೇಕ್ ಬಿದ್ದಿದ್ದು, ಯಾವುದೇ ಏರಿಕೆ ಅಥವಾ ಇಳಿಕೆ ಕಾಣದೆ ತಟಸ್ಥವಾಗಿಯೇ ಉಳಿದಿದೆ. ಆದರೆ, ಬೆಳ್ಳಿ ಬೆಲೆ ಇಂದು ಭರ್ಜರಿ ಏರಿಕೆ ಕಂಡಿದ್ದು, ಕೆಜಿಗೆ 3 ಲಕ್ಷದ 70 ಸಾವಿರ ರೂಪಾಯಿಗೆ ತಲುಪಿದೆ.
ಜನವರಿ 27, 2026 (ಮಂಗಳವಾರ) ರಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹16,195ಕ್ಕೆ ಸ್ಥಿರವಾಗಿದ್ದು, 10 ಗ್ರಾಂ ಶುದ್ಧ ಚಿನ್ನದ ಬೆಲೆ ₹1,61,950 ಆಗಿದೆ. 22 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹14,845 ಇದ್ದು, 10 ಗ್ರಾಂಗೆ ₹1,48,450 ಇದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರವೂ ಇದೇ ಮಟ್ಟದಲ್ಲಿದ್ದು, ಈ ಬೆಲೆಯಲ್ಲಿ ಜಿಎಸ್ಟಿ ಸೇರಿಲ್ಲ. ಹೀಗಾಗಿ ಆಭರಣ ಮಳಿಗೆಗಳಲ್ಲಿ ದರಗಳಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರಬಹುದು.
ಇನ್ನು ಬೆಳ್ಳಿ ಬೆಲೆ ಇಂದು ಪ್ರತಿ ಗ್ರಾಂಗೆ ₹10 ಏರಿಕೆಯಾಗಿದ್ದು, ಗ್ರಾಂ ದರ ₹370 ಆಗಿದೆ. ಇದರೊಂದಿಗೆ ಕೆಜಿ ಬೆಲೆಯಲ್ಲಿ ₹10,000 ಏರಿಕೆ ಕಂಡುಬಂದಿದ್ದು, ಪ್ರತಿ ಕೆಜಿಗೆ ₹3,70,000 ರೂಪಾಯಿ ದಾಖಲಾಗಿದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಬೆಳ್ಳಿ ಬೆಲೆ ಸುಮಾರು 200% ನಷ್ಟು ಏರಿಕೆ ಕಂಡಿದ್ದರೆ, ಚಿನ್ನದ ಬೆಲೆ ಸುಮಾರು 80% ವರೆಗೆ ಹೆಚ್ಚಳವಾಗಿದೆ. ಸೌರಶಕ್ತಿ, ಎಲೆಕ್ಟ್ರಿಕ್ ವಾಹನಗಳು (ಇವಿ), ಗ್ರಿಡ್ ಮೂಲಸೌಕರ್ಯ ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ಬೆಳ್ಳಿಯ ಬಳಕೆ ಹೆಚ್ಚುತ್ತಿರುವುದರಿಂದ ಅದರ ಬೇಡಿಕೆ ಜಾಸ್ತಿಯಾಗಿದ್ದು,
ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ. ಅದೇ ರೀತಿ, ಚಿನ್ನವು ಸುರಕ್ಷಿತ ಹೂಡಿಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂಬ ನಿರೀಕ್ಷೆಯನ್ನೂ ತಜ್ಞರು ವ್ಯಕ್ತಪಡಿಸಿದ್ದಾರೆ.



