ಮಂಗಳೂರು: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯ ನಡುವೆ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿದ್ದ ಹಡಗುಗಳ ಸಂಚಾರಕ್ಕೆ ಈಗ ತಾತ್ಕಾಲಿಕ ಪರಿಹಾರ ಕಂಡುಬಂದಿದೆ.
ಇರಾನ್‌ನಿಂದ ನಾಲ್ಕು ಹಡಗುಗಳಿಗೆ ಅನುಮತಿ ಸಿಕ್ಕಿದ್ದು, ಮೊದಲ ಹಡಗು ಮಾರ್ಚ್ 12 ರಂದು ಮುಂಬೈಗೆ ತಲುಪಿತ್ತು. ನಂತರ ‘ಶಿವಾಲಿಕ್’ ಹಡಗು 46,000 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಮುಂದ್ರಾ ಬಂದರಿನಲ್ಲಿ ಅನ್‌ಲೋಡ್ ಮಾಡಿದ್ದು, ಉಳಿದ 26 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಇಂದೇ ಮಂಗಳೂರು ಬಂದರಿಗೆ ತಂದು ಅನ್‌ಲೋಡ್ ಮಾಡುವ ಸಾಧ್ಯತೆ ಇದೆ. ಇದರಿಂದ ದೇಶದಲ್ಲಿ ಉಂಟಾಗಿದ್ದ ಎಲ್‌ಪಿಜಿ ಕೊರತೆ ಭೀತಿಗೆ ತಾತ್ಕಾಲಿಕ ರಿಲೀಫ್ ಸಿಗುವ ನಿರೀಕ್ಷೆಯಿದೆ. ಜೊತೆಗೆ ‘ನಂದಾದೇವಿ’ ಮತ್ತು ‘ಜಗ್ ಲಾಡ್ಕಿ’ ಹಡಗುಗಳು ಇಂದು ಭಾರತ ತಲುಪಬಹುದಾಗಿದೆ.
ಇವುಗಳಿಂದ ಒಟ್ಟಾರೆ ಸುಮಾರು 92,700 ಮೆಟ್ರಿಕ್ ಟನ್ ಎಲ್‌ಪಿಜಿ ಮತ್ತು ಕಚ್ಚಾ ತೈಲ ಲಭ್ಯವಾಗಲಿದೆ. ಇಂದಿನ ಘಟನೆಯಿಂದ ದೇಶದಲ್ಲಿ ಉಂಟಾದ ಎಲ್‌ಪಿಜಿ ಕೊರತೆ ತಾತ್ಕಾಲಿಕವಾಗಿ ಶಮನವಾಗಲಿದೆ. ಹಾರ್ಮುಜ್‌ನಲ್ಲಿ ಸಿಲುಕಿರುವ ಇತರ ಹಡಗುಗಳ ಬಿಡುಗಡೆಗಾಗಿ ಇರಾನ್‌ಗೆ ವೈದ್ಯಕೀಯ ನೆರವು ಒದಗಿಸುವ ವಿನಂತಿ ಬಂದಿದ್ದು, ಭಾರತ–ಇರಾನ್ ಸಹಕಾರದಿಂದ ಹಡಗುಗಳ ಸಾಗಣೆ ಕ್ರಮೇಣ ಪುನರಾರಂಭವಾಗುತ್ತಿದೆ.



