ಮಂಡ್ಯ:- ಜಿಲ್ಲೆಯ ಮದ್ದೂರು ಪಟ್ಟಣದ ಚನ್ನೇಗೌಡ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿ ವಿಸರ್ಜನೆ ವೇಳೆ ಅನ್ಯ ಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದನ್ನು ಖಂಡಿಸಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ನಿಷೇಧಾಜ್ಞೆ ನಡುವೆಯೇ ಮದ್ದೂರು ಪಟ್ಟಣದಲ್ಲಿ ಸ್ಥಳೀಯರು, ಮಹಿಳೆಯರು, ಮಕ್ಕಳು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಕಲ್ಲು ತೂರಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. ಸ್ಥಳೀಯರ ಪ್ರತಿಭಟನೆಗೆ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಸದಸ್ಯರು ಸಾಥ್ ನೀಡಿದರು. ಡಿಜೆ ಸದ್ದಿಗೆ ಯುವಕರು ಕೈಯಲ್ಲಿ ಕೇಸರಿ ಬಾವುಟ ಹಿಡಿದು ನೃತ್ಯ ಮಾಡುತ್ತಿದ್ದರು.
ಮಸೀದಿ ಮುಂದೆ ಡಿಜೆ ಹಾಕಿ ಹಿಂದೂ ಕಾರ್ಯಕರ್ತರು ನೃತ್ಯ ಮಾಡಲು ಆರಂಭಿಸಿದರು. ಮಸೀದಿ ಜಾಗ ಬಿಟ್ಟು ಹೋಗುವಂತೆ ಪೊಲೀಸರು ಈ ಸಂದರ್ಭದಲ್ಲಿ ಸೂಚಿಸಿದರು. ಆದರೆ ಹಿಂದೂ ಕಾರ್ಯಕರ್ತರು ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸ್ಥಳದಿಂದ ಕದಲಿಲ್ಲ. ಘೋಷಣೆ ಕೂಗುತ್ತಾ ಡ್ಯಾನ್ಸ್ ಮಾಡುತ್ತಿದ್ದಂತೆ ಪೊಲೀಸರು ಲಾಠಿ ಬೀಸಿದ್ದಾರೆ. ಲಾಠಿ ಬೀಸುತ್ತಿದ್ದಂತೆ ಯುವಕರು ದಿಕ್ಕಾಪಾಲಾಗಿ ಓಡಿದ್ದಾರೆ. ಈ ವೇಳೆ ಹಲವರಿಗೆ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.