ನೆಲಮಂಗಲ:- ನೆಲಮಂಗಲ ತಾಲೂಕಿನ ತುಮಕೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಹನುಮಂತಪುರ ಗೇಟ್ ಬಳಿ ಭೀಕರ ಅವಘಡ ಸಂಭವಿಸಿದೆ.
ಬೆಂಗಳೂರಿನಿಂದ ಕಲಬುರಗಿಗೆ ಹೊರಟಿದ್ದ ಸಂಜನಾ ಟ್ರಾವೆಲ್ಸ್ಗೆ ಸೇರಿದ ಖಾಸಗಿ ಬಸ್ ಬೆಳಗ್ಗಿನ ಜಾವ ಸುಮಾರು 3 ಗಂಟೆ ವೇಳೆಗೆ ಚಾಲಕನನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಬಳಿಕ ನೆಲಮಂಗಲ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಸ್ಸಿನಲ್ಲಿ ಚಾಲಕರು ಸೇರಿ ಸುಮಾರು 40 ಮಂದಿ ಪ್ರಯಾಣಿಕರು ಇದ್ದು, ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ. ಆದರೆ ಬಸ್ನ ಲಗೇಜ್ ಬಾಕ್ಸ್ನಲ್ಲಿ ಇಟ್ಟಿದ್ದ ಪ್ರಯಾಣಿಕರ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡ ಪ್ರಯಾಣಿಕರು ಕಣ್ಣೀರು ಹಾಕಿರುವುದು ಕಂಡುಬಂದಿದೆ.



