ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪ್ರಮುಖ ಧಾರ್ಮಿಕ ಕ್ಷೇತ್ರಗಳು ಮತ್ತು ಪಾರಂಪರಿಕ ತಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಭಯೋತ್ಪಾದಕ ದಾಳಿ ಸಂಭವಿಸುವ ಸಾಧ್ಯತೆ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಾರತದ ಪ್ರಮುಖ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಂಚು ರೂಪಿಸಿದೆ ಎನ್ನಲಾಗಿದೆ. ಐಇಡಿ ದಾಳಿ ಸಾಧ್ಯತೆ ಕುರಿತು ಎಚ್ಚರಿಕೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಕೆಂಪು ಕೋಟೆ ಸುತ್ತಮುತ್ತ, ಚಾಂದಿನಿ ಚೌಕ್ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ವಿಶೇಷವಾಗಿ ದೇವಸ್ಥಾನಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಗುಪ್ತಚರ ಇಲಾಖೆ ಮಾಹಿತಿ ಪರಿಶೀಲನೆ ನಡೆಸುತ್ತಿದ್ದು, ಕೇಂದ್ರ ಸಂಸ್ಥೆಗಳು ಮತ್ತು ದೆಹಲಿ ಪೊಲೀಸರು ನಿಕಟ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಟಿವಿ ಪರಿಶೀಲನೆ, ವಾಹನ ತಪಾಸಣೆ, ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕ್ವಾಡ್ ಹಾಗೂ ತ್ವರಿತ ಪ್ರತಿಕ್ರಿಯೆ ತಂಡಗಳನ್ನು ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಆತಂಕಪಡದೆ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.



