ವಿಜಯಸಾಕ್ಷಿ ಸುದ್ದಿ, ಬೆಟಗೇರಿ
ಮೂರು ವರ್ಷಗಳ ಹಿಂದೆ ವಯಕ್ತಿಕ ಕೆಲಸಕ್ಕಾಗಿ ಪಡೆದುಕೊಂಡಿದ್ದ ಒಂದು ಲಕ್ಷ.ರೂಗಳನ್ನು ಬೇಗ ವಾಪಸ್ ಕೊಡುತ್ತೇನೆ ಎಂದು ಹೇಳಿ ಕಾಲಾವಕಾಶ ಕೇಳಿದ್ದರೂ ಹಣ ನೀಡಿದಾತ ತನ್ನ ತಮ್ಮನೊಂದಿಗೆ ಕೂಡಿಕೊಂಡು ರಾತ್ರಿ ವೇಳೆ ಬೇರೊಂದು ಸ್ಥಳಕ್ಕೆ ಕರೆಯಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ಬೆಟಗೇರಿಯಲ್ಲಿ ನಡೆದಿದೆ.
ಬೆಟಗೇರಿ ಮನಿಯಾರ್ ಓಣಿಯ ಶಬ್ಬೀರಹ್ಮದ್ ಅಮೀನ್‌ಸಾಬ್ ಮನಿಯಾರ್ ಎಂಬುವರು ಆರೋಪಿ ಬೆಟಗೇರಿಯ ಸೆಟ್ಲಮೆಂಟ್ ಏರಿಯಾದ ನಿವಾಸಿ ಗಿರೀಶ್ ರಮೇಶ್ ಕಟ್ಟಿಮನಿ ಎಂಬುವರ ಬಳಿ ತನ್ನ ವೈಯಕ್ತಿಕ ಕೆಲಸಕ್ಕೆ ಹಣದ ಅಡಚಣೆಯಾಗಿದ್ದರಿಂದ ಒಂದು ಲಕ್ಷ.ರೂ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದರು. ಆಗಾಗ ಶಬ್ಬೀರಹ್ಮದ್ ಬಳಿ ಗಿರೀಶ್ ಕಟ್ಟಿಮನಿ ಹಣವನ್ನು ವಾಪಸ್ ಕೊಡುವಂತೆಯೂ ಕೇಳುತ್ತ ಬಂದಿದ್ದರು. ಆ ಸಂದರ್ಭದಲ್ಲಿ, ವ್ಯವಹಾರದಲ್ಲಿ ನಷ್ಟವಾಗಿದ್ದು, ಹಣವನ್ನು ಇನ್ನೂ ಸ್ವಲ್ಪ ದಿನಗಳಲ್ಲಿಯೇ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದರು.
ಜುಲೈ ೧೦ರಂದು ರಾತ್ರಿ ೮.೩೦ರ ಸಮಯಕ್ಕೆ ಫಿರ್ಯಾದಿ ಶಬ್ಬೀರಹ್ಮದ್ ಮನೆಗೆ ಬಂದ ಇನ್ನೊಬ್ಬ ಆರೋಪಿ ನವೀನ್ ರಮೇಶ್ ಕಟ್ಟಿಮನಿ, ಸದರಿ ಹಣಕಾಸಿನ ವಿಷಯವಾಗಿ ಮಾತನಾಡಲು ತನ್ನ ಅಣ್ಣ ಗಿರೀಶ್ ಕರೆಯುತ್ತಿದ್ದಾನೆ ಬಾ ಎಂದು ಹೇಳಿ ತನ್ನ ಸಂಗಡವೇ ಗದಗ ರೈಲ್ವೇ ನಿಲ್ದಾಣದ ಬಳಿಯಿರುವ ದುರ್ಗಾದೇವಿ ಗುಡಿಯ ಹಿಂದಿನ ಮೈದಾನಕ್ಕೆ ಕರೆದುಕೊಂಡು ಹೋಗಿದ್ದಾನೆ.
ಅಲ್ಲಿ ಆರೋಪಿ ಗಿರೀಶ್ ಹಾಗೂ ಅವನ ತಮ್ಮ ನವೀನ್ ಇಬ್ಬರೂ ಸೇರಿಕೊಂಡು ಜೀವಕ್ಕೆ ಹಾನಿ ಮಾಡುವ ಉದ್ದೇಶದಿಂದ ‘ನಮ್ಮ ಹಣ ವಾಪಸ್ ಕೊಡ್ತೀಯೋ ಇಲ್ಲವೋ’ ಎಂದು ಕೆಟ್ಟ ಶಬ್ಧಗಳಿಂದ ಬೈದು ಹೊಡಿಬಡಿ ಮಾಡಿದ್ದಲ್ಲದೇ ಅಲ್ಲಿಯೇ ಇದ್ದ ಕ್ರಿಕೆಟ್ ಸ್ಟಂಪ್ ಒಂದರಿಂದ ಫಿರ್ಯಾದಿ ಶಬ್ಬೀರಹ್ಮದ್‌ಗೆ ಏಕಾಏಕಿ ಬೆನ್ನು, ಕಾಲು, ಕೈಗಳ ಮೇಲೆ ಮುರಿದುಹೋಗುವಂತೆ ಹೊಡೆದು, ಇನ್ನೊಂದು ವಾರದಲ್ಲಿ ನಮ್ಮ ಹಣ ವಾಪಸ್ ಕೊಡದಿದ್ದರೆ ನಿನ್ನನ್ನು ಜೀವಸಹಿತ ಬಿಡುವದಿಲ್ಲ ಎಂದು ಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲಾಗಿದೆ.
ಗಿರೀಶ್ ರಮೇಶ್ ಕಟ್ಟಿಮನಿ ಹಾಗೂ ನವೀನ್ ರಮೇಶ ಕಟ್ಟಿಮನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸಾಲದ ಹಣ ವಾಪಸ್ ಕೊಡ್ತೀನಿ ಅಂದ್ರೂ ಬಿಡದ ಆರೋಪಿಗಳು; ಸ್ಟಂಪ್ ನಿಂದ ಥಳಸಿ ಪರಾರಿ
Advertisement