ವಿಜಯಸಾಕ್ಷಿ ಸುದ್ದಿ, ಹಾವೇರಿ : ಶಿಗ್ಗಾವಿ-ಸವಣೂರು ಕ್ಷೇತ್ರದ ಜನರ ಪ್ರೀತಿ, ವಿಶ್ವಾಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮ್ಮ ನಿಮ್ಮ ಸಂಬಂಧ ಶಾಶ್ವತವಾದದ್ದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಶಿಗ್ಗಾವಿ ಕ್ಷೇತ್ರದಲ್ಲಿ ನಡೆಸುತ್ತಿರುವ ಧನ್ಯವಾದ ಯಾತ್ರೆಯಲ್ಲಿ ಪಾಲ್ಗೊಂಡು ಹಳೆ ಮುತ್ತಳ್ಳಿ, ತಿಮ್ಮಾಪುರ, ಎನ್.ಎಂ. ತಡಸ, ಕಡಹಳ್ಳಿ, ಹಿರೇಬೆಂಡಿಗೇರಿ, ಚಿಕ್ಕಬೆಂಡಿಗೇರಿ, ಬೆಳವಲಕೊಪ್ಪ, ಸುರುಪ್ ಬೆಂಡಿಗೇರಿ ಗ್ರಾಮಗಳಲ್ಲಿ ಮತದಾರರಿಗೆ ಧನ್ಯವಾದ ಅರ್ಪಿಸಿ ಮಾತನಾಡಿದರು.
ನನ್ನನ್ನು ನಾಲ್ಕು ಬಾರಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದೀರಿ, ಉಪಕಾರ ಮಾಡಿದವರ ಉಪಕಾರ ಸ್ಮರಣೆ ಮಾಡುವುದು ನಮ್ಮ ಧರ್ಮ. ಕೇವಲ ಅಧಿಕಾರ ಇದ್ದರೆ ಮಾತ್ರ ಬರಬೇಕೆಂದು ಇಲ್ಲ. ನಮ್ಮ ನಿಮ್ಮ ನಡುವಿನ ಸಂಬಂಧ ಮುಖ್ಯ. ನಾನು ಮೊದಲಿನಂತೆಯೇ ಸದಾಕಾಲ ನಿಮ್ಮಕೆಲಸ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.
ಸಾಮಾನ್ಯವಾಗಿ ರಾಜಕಾರಣದಲ್ಲಿ ಚುನಾವಣೆಗೆ ಸೀಮಿತ ಅಥವಾ ರಾಜಕಾರಣಕ್ಕೆ ಸೀಮತವಾದ ಸಂಬಂಧಗಳಿರುತ್ತವೆ. ಎರಡು ರೀತಿಯ ರಾಜಕಾರಣ ಇರುತ್ತದೆ. ಒಂದು ಅಧಿಕಾರದ ರಾಜಕಾರಣ ಇನ್ನೊಂದು ಜನರ ರಾಜಕಾರಣ. ನಾನು ನಿಮ್ಮೆಲ್ಲರ ಆಶೀರ್ವಾದದಿಂದ ಜನರ ರಾಜಕಾರಣ ಮಾಡುತ್ತ ಬಂದಿದ್ದೇನೆ. ಆ ಪ್ರೀತಿ ಉಳಿಸಿಕೊಳ್ಳಲು ನನ್ನ ಉಸಿರಿರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ ಎಂದು ಹೇಳಿದರು.
ಶಿಗ್ಗಾವಿ ತಾಲೂಕು ಯಾವ ರೀತಿ ಅಭಿವೃದ್ಧಿಯಾಗಿದೆ ಎನ್ನುವುದನ್ನು ನೀವೆಲ್ಲ ಗಮನಿಸಿದ್ದೀರಿ. ಅಭಿವೃದ್ಧಿ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಊರಿಗೆ ಯಾವುದಾದರೂ ಒಂದು ಕೆಲಸ ಮಾಡಿದರೆ ಮುಗಿಯಿತು ಎನ್ನುವ ಕಾಲ ಇತ್ತು. ಅದೇ ಕೆಲಸವನ್ನು ಹತ್ತು ವರ್ಷ ಹೇಳುತ್ತಿದ್ದರು. ಆದರೆ ಈಗ ಜನರು ಜಾಗೃತರಾಗಿದ್ದಾರೆ.

ಜನಪ್ರತಿನಿಧಿಗಳು ಒಂದಾದ ನಂತರ ಒಂದು ಕೆಲಸವನ್ನು ನಿರಂತರ ಮಾಡಬೇಕಾಗುತ್ತದೆ. ಆಗ ಮನಸಿಗೆ ಸಮಾಧಾನ ಆಗುತ್ತದೆ. ತಾಲೂಕಿನ ಅಭಿವೃದ್ಧಿ ಹೇಗೆ ಎಂದು ಒಂದು ತೋಟ ಮಾಡಿ, ಹದ ಮಾಡಿ, ಸಸಿ ನೆಟ್ಟು ಬೆಳೆಸಿದ್ದೇವೆ. ಕೆಲವು ಫಲ ಕೊಡುತ್ತವೆ. ಕೆಲವು ಫಲ ಕೊಡುವುದಿಲ್ಲ. ಆ ತೋಟವನ್ನು ಎಲ್ಲರೂ ಸಂರಕ್ಷಣೆ ಮಾಡಿಕೊಂಡು ಹೋದರೆ, ಅದರಿಂದ ನಮಗೆ ಹೆಚ್ಚಿನ ಫಲ ದೊರೆಯುತ್ತದೆ. ತೋಟ ಕಾಯುವ ಮತ್ತು ಬೆಳೆಸುವ ಕೆಲಸವನ್ನು ತಾವೆಲ್ಲರೂ ಸೇರಿ ಮಾಡಬೇಕು. ನಿಮ್ಮ ಜೊತೆಗೆ ನಾನಿದ್ದೇನೆ ಎಂದು ಹೇಳಿದರು.
ನಾನು ಜಾತಿ, ಮತ, ಪಂಥ ಭೇದವಿಲ್ಲದೆ ಕೆಲಸ ಮಾಡಿದ್ದೇನೆ. ಚುನಾವಣೆಗಳು ಬರುತ್ತವೆ ಹೋಗುತ್ತವೆ. ಯಾರಾದರೂ ಶಾಸಕರಾಗಬಹುದು, ಯಾರಾದರೂ ಸಂಸದರಾಗಬಹುದು. ಆದರೆ, ಊರಿನ ಅಭಿವೃದ್ಧಿ ಹಾಗೂ ಸಾಮಾಜಿಕ ಸಾಮರಸ್ಯಕ್ಕೋಸ್ಕರ ನಾವೆಲ್ಲರೂ ಒಗ್ಗಟ್ಟಾಗಿರಬೇಕು. ಮನುಷ್ಯರಾಗಿ ಹುಟ್ಟಿದ ಮೇಲೆ ಬದುಕು ನಮ್ಮ ಕೈಯಲ್ಲಿರುತ್ತದೆ. ನಾವೆಲ್ಲ ಒಂದು ಎಂದು ಕೆಲಸ ಕಾರ್ಯಗಳನ್ನು ಮಾಡೋಣ ಎಂದರು.
ನಿಮ್ಮ ಊರಿಗೆ ಬಂದಾಗ ನೀವು ತೋರಿದ ಪ್ರೀತಿ ವಿಶ್ವಾಸ ಮರೆಯಲು ಸಾಧ್ಯವಿಲ್ಲ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ನಿಮ್ಮ ಸಂಬಂಧ ನಿರಂತರವಾಗಿ, ಶಾಶ್ವತವಾಗಿ ಉಳಿಸಿಕೊಂಡು ಹೋಗೋಣೆ್ವಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.



