ವಿಜಯಸಾಕ್ಷಿ ಸುದ್ದಿ, ಹಾವೇರಿ : ನಾನು ಮುಖ್ಯಮಂತ್ರಿಯಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದು, ರೈತರ ಮಕ್ಕಳಿಗೆ ವಿದ್ಯಾನಿಧಿ, ರೈತರ ಪಂಪ್‌ಸೆಟ್‌ಗಳಿಗೆ ಡಿಸೇಲ್ ಸಬ್ಸಿಡಿ, ಐದು ಲಕ್ಷದವರೆಗೆ ಶೂನ್ಯ ಬಡ್ಡಿ ಸಾಲ ಯೋಜನೆ ಮಾಡಿದೆ. ಅದರ ಎಲ್ಲ ಪುಣ್ಯ ಕ್ಷೇತ್ರದ ಜನತೆಗೆ ಸಲ್ಲುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾವಿ-ಸವಣೂರು ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಮತದಾರರಿಗೆ ಧನ್ಯವಾದ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರವಾಹ ಬಂದ ಸಂದರ್ಭದಲ್ಲಿ ಶಿಗ್ಗಾವಿ ತಾಲೂಕಿನಲ್ಲಿ 13 ಸಾವಿರ ಮನೆಗಳನ್ನು ನೀಡಿರುವುದು ಒಂದು ದಾಖಲೆಯಾಗಿದೆ. ರೈತರಿಗೆ ಡಿಸೇಲ್ ಸಬ್ಸಿಡಿ, ಯಶಸ್ವಿನಿ ಯೋಜನೆ ಮರು ಜಾರಿ ಮಾಡಿರುವುದು, ಸಮುದಾಯ ಭವನ, ಕುಡಿಯುವ ನೀರಿನ ಸೌಲಭ್ಯ ಒದಗಿಸಿದ್ದೇನೆ. ಅಭಿವೃದ್ಧಿ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಪಕ್ಷದ ವರಿಷ್ಠರು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಕ್ಕೆ ಹಾವೇರಿ ಗದಗ ಲೋಕಸಭೆ ಕ್ಷೇತ್ರದ ಸಂಸದನಾಗಿದ್ದೇನೆ. ಆದರೆ, ನನ್ನ ಮನಸ್ಸು ಮಾತ್ರ ಶಿಗ್ಗಾವಿ-ಸವಣೂರಿನಲ್ಲಿಯೇ ಇದೆ. ನಾನು ಶಾಸಕನಲ್ಲದಿದ್ದರೂ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದರು.