ವಿಜಯಸಾಕ್ಷಿ ಸುದ್ದಿ, ರೋಣ : ಮಾಜಿ ಮುಖ್ಯಮಂತ್ರಿ ದಿ. ಖ. ದೇವರಾಜ ಅರಸುರವರು ನೊಂದವರ ಪಾಲಿನ ನಂದಾದೀಪವಾಗಿದ್ದರು. ಅವರ ಸದೃಢ ನಿರ್ಧಾರಗಳಿಂದ ಇಂದು ಶೋಷಿತ ಸಮುದಾಯಗಳಲ್ಲಿ ಗಟ್ಟಿ ಧ್ವನಿ ಮೊಳಗಿದೆ ಎಂದು ಪುರಸಭೆಯ ಸದಸ್ಯ ಸಂಗನಗೌಡ ಪಾಟೀಲ ಹೇಳಿದರು.
ಅವರು ಸೋಮವಾರ ತಾಲೂಕಾಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಗುರುಭವನದಲ್ಲಿ ಜರುಗಿದ ದಿ. ಡಿ ದೇವರಾಜ ಅರಸುರವರ 109ನೇ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅರಸುರವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಹಿಂದುಳಿದ, ಶೋಷಿತರ ಬಲವರ್ಧನೆಗೆ ಅನೇಕ ಯೋಜನೆಗಳನ್ನು ರೂಪಿಸಿ, ಯಾರ ಮುಲಾಜಿಗೆ ಒಳಗಾಗದೆ ಅನುಷ್ಠಾನಗೊಳಿಸಿದರು. ಅಲ್ಲದೆ ಬಡ ಹಾಗೂ ಶೋಷಿತ ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು ಎಂಬ ದೃಷ್ಟಿಯಿಂದ ವಿದ್ಯಾರ್ಥಿ ವಸತಿ ನಿಲಯಗಳನ್ನು ಸ್ಥಾಪಿಸಿ ಸಮಾಜಿಕ ಕ್ರಾಂತಿಯನ್ನು ಮೊಳಗಿಸಿದರು. ಅವರ ದೂರದೃಷ್ಟಿಯ ಕಾರ್ಯಗಳಿಂದ ಇಂದು ರಾಜ್ಯದಲ್ಲಿ ಶೋಷಿತ ವರ್ಗದ ಧ್ವನಿ ಗಟ್ಟಿಯಾಗಿದೆ ಎಂದರು.
ವಸತಿ ನಿಲಯಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಓದಿನತ್ತ ಹೆಚ್ಚು ಗಮನಹರಿಸಬೇಕು. ಸರಕಾರ ಅನೇಕ ಯೋಜನೆಗಳನ್ನು ನಿಮಗೆ ನೀಡಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಣ ಪಡೆಯಬೇಕು. ವಸತಿ ನೀಲಯಗಳಿಗೆ ಹಾಗೂ ಇಲಾಖೆಗೆ ಒಳ್ಳೆಯ ಹೆಸರು ತರಬೇಕು.
ಅಂದಾಗ ಮಾತ್ರ ಸರಕಾರ ನೀಡುವ ಯೋಜನೆಗಳಿಗೆ ಬೆಲೆ ಬರುತ್ತದೆ ಎಂದ ಅವರು, ಉತ್ತಮ ಅಂಕಗಳನ್ನು ಗಳಿಸಿ ತಾಲೂಕಿಗೆ ಕಿರ್ತಿ ತನ್ನಿ ಎಂದು ಹಾರೈಸಿದರು.
ಇದೇ ಸಂಧರ್ಭದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಭಾಕರ ಉಳ್ಳಾಗಡ್ಡಿ ಉಪನ್ಯಾಸ ನೀಡಿದರು. ತಹಸೀಲ್ದಾರ್ ನಾಗರಾಜ ಕೆ ಅಧ್ಯಕ್ಷತೆ ವಹಿಸಿದ್ದರು. ಎಚ್.ಎಸ್. ಸೋಂಪುರ, ಸಂಜಯ ದೊಡ್ಡಮನಿ, ಗೀತಾ ಆಲೂರ, ಬಲರಾಮ ನಾಯ್ಕ, ಸಿ.ಎಸ್. ನೀಲಗುಂದ, ಮಲ್ಲಿಕಾರ್ಜುನ ಹನಸಿ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.



