ಚಿಕ್ಕೋಡಿ: ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಜೀವನಾಡಿಯಂತಿರುವ ಹಿಪ್ಪರಗಿ ಬ್ಯಾರೇಜ್‌ನ ಕ್ರಸ್ಟ್ ಗೇಟ್ ಸಂಖ್ಯೆ 22 ತಾಂತ್ರಿಕ ದೋಷದಿಂದಾಗಿ ಮುರಿದುಬಿದ್ದಿದ್ದು, ಭಾರಿ ಪ್ರಮಾಣದ ನೀರು ನದಿಗೆ ಪೋಲಾಗುತ್ತಿದೆ. ಬ್ಯಾರೇಜ್‌ನಿಂದ ನೀರು ಕೃಷ್ಣಾ ನದಿಯ ಮೂಲಕ ಆಲಮಟ್ಟಿ ಅಣೆಕಟ್ಟೆಯ ಹಿನ್ನೀರಿನತ್ತ ಅತೀವೇಗದಲ್ಲಿ ಹರಿಯುತ್ತಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಸಮೀಪ ಕೃಷ್ಣಾ ನದಿಗೆ ಅಡ್ಡಲಾಗಿರುವ ಹಿಪ್ಪರಗಿ ಬ್ಯಾರೇಜ್‌ನ ಗೇಟ್ ತಾತ್ಕಾಲಿಕವಾಗಿ ದುರಸ್ತಿ ಸಾಧ್ಯವಾಗದಷ್ಟು ಹಾನಿಗೊಳಗಾಗಿದೆ. ಪರಿಣಾಮ ಸಾವಿರಾರು ಕ್ಯೂಸೆಕ್ ನೀರು ಪೋಲಾಗುವ ಆತಂಕ ಎದುರಾಗಿದೆ.
ಮುಂಗಾರು ಹಂಗಾಮಿನಲ್ಲಿ ಸಂಗ್ರಹಿಸಿದ ನೀರನ್ನು ಬೇಸಿಗೆ ಸಮಯದಲ್ಲಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಸಬೇಕಾದ ಸಂದರ್ಭದಲ್ಲೇ ಈ ಅವಘಡ ಸಂಭವಿಸಿದೆ. ನೀರಿನ ಮಟ್ಟ ಕುಸಿದರೆ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಗಂಭೀರ ಸಮಸ್ಯೆ ಉಂಟಾಗಬಹುದು ಎಂದು ನದಿ ತೀರದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳಾದ ನಾಗರಾಜ್ ಹಾಗೂ ಪ್ರವೀಣ್ ಹುಣಸಿಕಟ್ಟಿ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸುತ್ತಿದ್ದಾರೆ. ತಾಂತ್ರಿಕ ತಂಡದ ಸಹಕಾರದೊಂದಿಗೆ ತುರ್ತು ಕಾರ್ಯಾಚರಣೆ ನಡೆಸಿ ನೀರು ಪೋಲಾಗುವುದನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ. ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಕಾರ್ಮಿಕರನ್ನು ಕರೆಸಿ ದುರಸ್ತಿ ಕಾರ್ಯ ಮುಂದುವರೆದಿದ್ದು, ಮುಳುಗು ತಜ್ಞರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಯುತ್ತಿದೆ.



