ಗದಗ ಜಿಲ್ಲೆಯ ಸಾಧನೆ ಅನನ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳನ್ನು ಗದಗ ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನಗೊಳಿಸಲಾಗಿದೆ. ಗದಗ ಜಿಲ್ಲೆಯ ಈ ಸಾಧನೆ ಪ್ರಶಂಸನೀಯ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.

Advertisement

ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಕಚೇರಿಯಲ್ಲಿ ಸೋಮವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಂಚ ಗ್ಯಾರಂಟಿ ಅನುಷ್ಠಾನದಲ್ಲಿ ಗದಗ ಜಿಲ್ಲೆ ರಾಜ್ಯದಲ್ಲಿಯೇ ಉತ್ತಮ ಸಾಧನೆ ಮಾಡಿದೆ. ಅರ್ಹರಿಗೆ ಸರ್ಕಾರದ ಸೌಲಭ್ಯ ಒದಗಿಸುವಲ್ಲಿ ಜಿಲ್ಲೆಯು ಮುಂಚೂಣಿಯಲ್ಲಿದೆ. ಅದಕ್ಕಾಗಿ ಸಮಿತಿಯ ಜಿಲ್ಲಾ ಹಾಗೂ ತಾಲೂಕಾ ಅಧ್ಯಕ್ಷರು, ಸದಸ್ಯರುಗಳು ಅಭಿನಂದನಾರ್ಹರು ಎಂದರಲ್ಲದೆ, ಪಂಚ ಗ್ಯಾರಂಟಿ ಅನುಷ್ಠಾನದಲ್ಲಿ ಶ್ರಮಿಸಿದ ಇಲಾಖಾಧಿಕಾರಿಗಳ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮರ್ಪಕವಾಗಿ ಸಾಗಿದೆ. ಯುವನಿಧಿ ಫಲಾನುಭವಿಗಳು ಉದ್ಯೋಗ ಮೇಳಕ್ಕೆ ಆಗಮಿಸುವ ಮೂಲಕ ಉದ್ಯೋಗ ಪಡೆಯಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಉದ್ಯೋಗಾದಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಸೂಚಿಸಿದರು.

ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುವ ಅಕ್ಕಿಯನ್ನು ಅಕ್ರಮ ಕಾಳ ಸಂತೆಗೆ ಸಾಗಾಟ ಮಾಡುವುದನ್ನು ಅಧಿಕಾರಿ ವರ್ಗ ಸಂಪೂರ್ಣ ಹತೋಟಿಗೆ ತರಬೇಕು. ಆ ಮೂಲಕ ಅರ್ಹ ಅನ್ನಭಾಗ್ಯ ಫಲಾನುಭವಿಗಳಿಗೆ ತಲುಪುವ ಮೂಲಕ ಹಸಿವು ಮುಕ್ತ ಕರ್ನಾಟಕದ ಸಂಕಲ್ಪ ಸಾಕಾರವಾಗಲಿ ಎಂದರು.

ಪ್ರಾಧಿಕಾರದ ತಾಲೂಕಾಧ್ಯಕ್ಷ ಅಶೋಕ ಮಂದಾಲಿ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಫಲಾನುಭವಿಗಳು ತಮ್ಮದೇ ರೀತಿಯ ಆರ್ಥಿಕ ಸಂಪನ್ಮೂಲ ಕಂಡುಕೊಂಡಿದ್ದಾರೆ. ಹಲವಾರು ಮಹಿಳೆಯರು ಸ್ವ ಉದ್ಯೋಗ ಕೈಗೊಂಡ ಸಾಕಷ್ಟು ಉದಾಹರಣೆಗಳು ಜಿಲ್ಲೆಯಲ್ಲಿವೆ ಎಂದರು.

ಸಮಿತಿಯ ಸದಸ್ಯ ಕೃಷ್ಣಗೌಡ ಎಚ್.ಪಾಟೀಲ ಮಾತನಾಡಿ, ಕೆಲವು ಫಲಾನುಭವಿಗಳ ಗೃಹಲಕ್ಷ್ಮೀ ಮೊತ್ತವು ಬ್ಯಾಂಕ್ ಖಾತೆಗೆ ಜಮೆಯಾಗದೇ ಇರುವ ಪ್ರಕರಣಗಳು ಕಂಡುಬಂದಿವೆ. ಅಧಿಕಾರಿ ವರ್ಗ ಅವುಗಳನ್ನು ಪರಿಶೀಲಿಸಿ ಅರ್ಹರಿಗೆ ಗೃಹಲಕ್ಷ್ಮೀ ಮೊತ್ತ ಜಮೆ ಮಾಡಿಸುವಲ್ಲಿ ಗಮನ ಹರಿಸುವಂತೆ ತಿಳಿಸಿದರು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ನೀಲವ್ವ ಬೋಳನವರ್, ಸದಸ್ಯರುಗಳಾದ ಈಶಣ್ಣ ಹುಣಸೀಕಟ್ಟಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿನಾಯ್ಕರ, ದೇಸಾಯಿ, ಸಾವಿತ್ರ‍್ರಿ ಹೂಗಾರ ಸೇರಿದಂತೆ ಇತರೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

“ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮೀ ಹಾಗೂ ಶಕ್ತಿ ಯೋಜನೆಗಳು ಆರ್ಥಿಕ ಸಬಲತೆಯೊಂದಿಗೆ ಸ್ತ್ರೀ ಸ್ವಾತಂತ್ರ್ಯ ನೀಡಿದೆ. ಮಹಿಳೆ ಸ್ವತಂತ್ರವಾಗಿ ಕುಟುಂಬ ನಿರ್ವಹಣೆ ಮಾಡುವ ಮೂಲಕ ಕುಟುಂಬವನ್ನು ಆರ್ಥಿಕವಾಗಿ ಪ್ರಬಲವಾಗಿಸಲು ಪಂಚ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ಅವುಗಳನ್ನು ಇನ್ನಷ್ಟು ಅರ್ಹರಿಗೆ ತಲುಪಿಸುವಲ್ಲಿ ಅಧಿಕಾರಿ ವರ್ಗ ಶ್ರಮಿಸಬೇಕು”

– ಎಸ್.ಆರ್. ಪಾಟೀಲ.

ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ.

ಯೋಜನೆಗಳ ಪ್ರಗತಿ ವಿವರ

ಗೃಹಲಕ್ಷ್ಮೀ ಯೋಜನೆಯಡಿ ಶೇ 92.02, ಅನ್ನಭಾಗ್ಯ ಯೋಜನೆಯಡಿ ಶೇ 97.96, ಗೃಹ ಜ್ಯೋತಿ ಯೋಜನೆಯಡಿ ಶೇ 95.51, ಯುವ ನಿಧಿ ಯೋಜನೆಯಡಿ ಶೇ 98 ಹಾಗೂ ಶಕ್ತಿ ಯೋಜನೆಯಡಿ ಶೇ 100ರಷ್ಟು ಪ್ರಗತಿ ಸಾಧನೆಯಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿದರು.


Spread the love

LEAVE A REPLY

Please enter your comment!
Please enter your name here