ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶ್ರಾವಣ ಮಾಸದ ಒಂದು ತಿಂಗಳು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಅಮೃತ ಭೋಜನ ನೀಡುತ್ತಿರುವ ಈ ಶಾಲೆಯ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ಅಮೃತ ಭೋಜನದ ದಾನಿ ಶಶಿಧರ ಸಂಕನಗೌಡ್ರ ಹೇಳಿದರು.
ಪಟ್ಟಣದ ಕೆ.ಜಿ.ಎಂ.ಎಸ್ ಶಾಲೆಯಲ್ಲಿ ಶುಕ್ರವಾರದಿಂದ ಪ್ರಾರಂಭವಾದ ಶ್ರಾವಣದ ಅಮೃತ ಭೋಜನದ ಮೊದಲ ದಿನದ ಆತಿಥ್ಯವನ್ನು ವಹಿಸಿಕೊಂಡು ಅವರು ಮಾತನಾಡಿದರು.
ಸರ್ಕಾರಿ ಹಾಗೂ ಖಾಸಗಿ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳಿದ್ದರೆ ಅವರಿಗೆ ಪುಸ್ತಕ ಅಥವಾ ವಿದ್ಯಾಭ್ಯಾಸಕ್ಕೆ ಬೇಕಾದ ಸಲಕರಣೆಗಳನ್ನು ಕೊಡಿಸುತ್ತೇನೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರ ಹೆಚ್ಚಿದೆ. ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣ ಸಿಗಲು ಸರ್ಕಾರಿ ಶಾಲೆಗಳನ್ನು ಉಳಿಸಿ ಅಭಿವೃದ್ಧಿಪಡಿಸಬೇಕು ಎಂದರು.
ನರೇಗಲ್ಲ ಕಾನಿಪ ಸಂಘದ ಅಧ್ಯಕ್ಷ ಆದರ್ಶ ಕುಲಕರ್ಣಿ ಮಾತನಾಡಿ, ಜೀವನದಲ್ಲಿ ಯಶಸ್ಸು ಕಾಣಬೇಕೆಂದರೆ ಅದಕ್ಕೆ ಶಿಕ್ಷಣವೊಂದೇ ತಳಹದಿ. ಸರ್ಕಾರಿ ಶಾಲೆಯಲ್ಲಿ ಸುಮಾರು ಶೇ. 80ರಷ್ಟು ಬಡ ಮಕ್ಕಳು ಇರುವರು. ಮಕ್ಕಳಲ್ಲಿ ಓದಿನ ಜತೆಗೆ ಅಮೃತ ಭೋಜನ ಯೋಜನೆ ಮಾಡಿರುವುದು ಶಿಕ್ಷಕರ ಅಭೂತಪೂರ್ವ ಕಾರ್ಯವಾಗಿದೆ ಎಂದರು.
ಮುಖ್ಯ ಶಿಕ್ಷಕ ಬಸವರಾಜ ಕುರಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಈ ಯೋಜನೆ ಸಾಂಗವಾಗಿ ನಡೆದುಕೊಂಡು ಬಂದಿದೆ. ಇದರಿಂದ ವಿದ್ಯಾರ್ಥಿಗಳ ಹಾಜರಾತಿ ಕೂಡ ಹೆಚ್ಚಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯ ಅಂದಾನಗೌಡ ಲಕ್ಕನಗೌಡ್ರ, ಈಶ್ವರ ಬೆಟಗೇರಿ, ಚಂದ್ರು ರಾಠೋಡ್, ಎನ್.ಎಲ್. ಚವ್ಹಾಣ, ಎಂ.ಪಿ. ಅಣಗೌಡರ, ಡಿ.ವಿ. ಕಳ್ಳಿ, ಜೆ.ಎ. ಪಾಟೀಲ, ಎಂ.ಎಸ್. ಮಾಳಶೆಟ್ಟಿ, ಎಸ್.ಐ. ಜಗಾಪೂರ, ರಾಜೇಶ್ವರಿ ತೊಂಡಿಹಾಳ ಇದ್ದರು.