ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಬಗರ್‌ಹುಕುಂ ರೈತರ ಹೋರಾಟವು 22ನೇ ದಿನಕ್ಕೆ ತಲುಪಿದ್ದು, ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸದಿರುವುದನ್ನು ಖಂಡಿಸಿ ಸೋಮವಾರ ವಿಭಿನ್ನ ಪ್ರತಿಭಟನೆ ಕೈಗೊಂಡು ನಗರದ ಗಾಂಧಿ ಸರ್ಕಲ್‌ನಿಂದ ಜಿಲ್ಲಾಡಳಿತ ಕಚೇರಿಯವರೆಗೆ ತಟ್ಟೆ ಹಿಡಿದು ಭಿಕ್ಷೆ ಬೇಡುವ ಮೂಲಕ `ಭಿಕ್ಷಾಟನೆ’ ನಡೆಸಿದರು.
ರೈತರು ಡೊಳ್ಳು ಬಾರಿಸುತ್ತಾ, ಕೈಯಲ್ಲಿ ತಟ್ಟೆ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದಾನಿಗಳಿಂದ ಹಣ, ಅಕ್ಕಿ, ತರಕಾರಿ ಮುಂತಾದ ವಸ್ತುಗಳನ್ನು ಬೇಡಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ, ಭಿಕ್ಷೆಯಿಂದ ಸಂಗ್ರಹಿಸಿದ ರೂ. 3,750 ನಗದು ಮೊತ್ತವನ್ನು ಜಿಲ್ಲಾಧಿಕಾರಿಗಳ ನಿಧಿಗೆ ನೀಡಿ, ಯಾವ ಅಧಿಕಾರಿಗಳೂ ಬಾರದ ಕಾರಣ ಮನವಿ ನಿಲ್ಲಿಸಿ ಧರಣಿ ಮುಂದುವರೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉತ್ತರ ಕರ್ನಾಟಕ ಮಹಾಸಭಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ, ಜಿಲ್ಲಾ ಉಸ್ತುವಾರಿ ಸಚಿವರು 21 ದಿನ ಕಳೆದರೂ ನಮ್ಮ ಕಡೆ ತಲೆ ಹಾಕದಿರುವುದು ಬೇಸರದ ಸಂಗತಿ. ಇನ್ನು ಎರಡು ದಿನಗಳ ಕಾಲ ಶಾಂತಿಯುತ ಹೋರಾಟ ನಡೆಸುತ್ತೇವೆ. ಆ ಬಳಿಕವೂ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ದೊರಕದಿದ್ದಲ್ಲಿ, ಉಗ್ರ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರೊ. ಎನ್.ಟಿ. ಪೂಜಾರ ಮಾತನಾಡಿ, ರೈತರು 21 ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಂದು ಸಮಸ್ಯೆಗಳನ್ನು ಆಲಿಸದಿರುವುದು ಖೇದಕರ. ಜಿಲ್ಲಾಡಳಿತವು ತಕ್ಷಣ ಸಚಿವರಿಗೆ ಸರಿಯಾದ ಮಾಹಿತಿಯನ್ನು ನೀಡಿ, ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಬಿ.ಎಸ್. ಚಿಂಚಲಿ, ನಾಮದೇವ, ಫಿರೋಜ್ ನದಾಫ್, ಎಮ್. ಶಲವಡಿ ಸೇರಿದಂತೆ ನಾಗಾವಿ, ಬೆಳಧಡಿ, ಹರ್ತಿ, ಶಿರಹಟ್ಟಿ, ಲಕ್ಷ್ಮೇಶ್ವರ, ಅಡವಿಸೋಮಾಪೂರ, ಗಜೇಂದ್ರಗಡ, ದಿಂಡೂರ, ಡೋಣಿ, ಮುರುಡಿ ಮುಂತಾದ ಗ್ರಾಮಗಳ ರೈತರು, ಮಹಿಳೆಯರು ಹಾಗೂ ಹೋರಾಟಗಾರರು ಉಪಸ್ಥಿತರಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರು ಕೊಟ್ಟ ಮಾತಿನಂತೆ, ಜಿಲ್ಲಾಧಿಕಾರಿಗಳು ಸಚಿವರಿಗೆ ಮನವರಿಕೆ ಮಾಡುವ ಮೂಲಕ ಸಚಿವರನ್ನು ಕರೆಸಿ, ರೈತರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು. ಆಡಳಿತದ ರೈತ ವಿರೋಧಿ ಧೋರಣೆ ಖಂಡನೀಯ. ಇದುವರೆಗೂ ಶಾಂತಿಯುತ ಹೋರಾಟಗಳನ್ನು ಮಾಡುತ್ತಾ ಬಂದಿದ್ದೇವೆ. ರೈತರ ಹೋರಾಟ ತೀವ್ರ ಸ್ವರೂಪ ಪಡೆಯುವ ಮೊದಲು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು.
– ರವಿಕಾಂತ ಅಂಗಡಿ.
ರಾಜ್ಯಾಧ್ಯಕ್ಷರು, ಉತ್ತರ ಕರ್ನಾಟಕ ಮಹಾಸಭಾ.