ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮೊಬೈಲ್, ಟಿವಿ ಮಾಧ್ಯಮದ ಆಧುನಿಕ ಭರಾಟೆಯಲ್ಲಿ ಬದುಕಿನ ಮೌಲ್ಯಗಳನ್ನು ತಿಳಿಸುವ ನಾಟಕ ಕಲೆ ತೆರೆಮರೆಗೆ ಸರಿಯುತ್ತಿದ್ದು, ಜೀವಂತ ನಾಟಕ ಕಲೆಯನ್ನು ಉಳಿಸಿ-ಬೆಳೆಸಿ-ಪ್ರೋತ್ಸಾಹಿಸುವ ಗುರುತರ ಜವಾಬ್ದಾರಿ ಎಲ್ಲರದ್ದಾಗಿದೆ ಎಂದು ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಹೇಳಿದರು.
ಅವರು ಪಟ್ಟಣಲ್ಲಿ ರಾಣೆಬೆನ್ನೂರಿನ ಮಂಜುನಾಥ ನಾಟ್ಯ ಸಂಘದವರು ರವಿವಾರದಿಂದ ಪ್ರಾರಂಭಿಸಿದ ನಾಟಕ ಪ್ರದರ್ಶನದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ವೃತ್ತಿರಂಗಭೂಮಿ ಕಲಾವಿದರು ಅಪ್ಪಟ ಕಲಾವಿದರಾಗಿದ್ದು, ವೇದಿಕೆಯಲ್ಲಿ ಪ್ರೇಕ್ಷಕರ ಮನಸನ್ನು ಸೆಳೆಯುವ ಸಾಮರ್ಥ್ಯವನ್ನು ರಂಗಭೂಮಿ ಕಲಾವಿದರು ಹೊಂದಿರುತ್ತಾರೆ. ನಮ್ಮ ತಾಲೂಕು ಹಾಗೂ ಗದಗ ಜಿಲ್ಲೆಯಲ್ಲಿ ಕಲಾವಿದರನ್ನು ಗೌರವದಿಂದ ಕಾಣುವ ಕಲಾಪೋಷಕರಿದ್ದು, ಇಂತಹ ನಾಟಕಗಳನ್ನು ಜನರು ನೋಡುವ ಮೂಲಕ ಅವರಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡಬೇಕು. ತೆರೆಯ ಹಿಂದಿನ ಕಲಾವಿದರ ಬದುಕು ಅತ್ಯಂತ ಕಷ್ಟದಾಯಕವಾಗಿರುತ್ತದೆ. ಸರಕಾರಗಳು ಸಹ ರಂಗಭೂಮಿಯ ಅಭಿವೃದ್ಧಿಗೆ ಸಹಾಯ ಒದಗಿಸುವದು ಅಗತ್ಯವಾಗಿದೆ.
ಲಕ್ಷ್ಮೇಶ್ವರ ತಾಲೂಕು ಸಾಂಸ್ಕೃತಿಕ ಕಲೆಗಳ ನೆಲೆವೀಡಾಗಿದ್ದು ಇಲ್ಲಿ ಕಲೆ, ಕಲಾವಿದರನ್ನು ಸದಾ ಗೌರವಿಸಲಾಗುತ್ತಿದೆ. ದೇಶದ ಮೊದಲ ಮಹಿಳಾ ನಾಟಕ ಕಂಪನಿ ಪ್ರಾರಂಭವಾಗಿದ್ದು ಲಕ್ಷ್ಮೇಶ್ವರದಲ್ಲಿ ಎನ್ನುವದು ನಮ್ಮ ಹೆಮ್ಮೆ. ಇಲ್ಲಿ ಅನೇಕ ಕಲಾವಿದರು, ನಾಟ್ಯ ಸಂಘಗಳು ಆಗಿ ಹೋಗಿದ್ದು, ರಂಗಭೂಮಿಯಲ್ಲಿರುವ ಕಲಾವಿದರಿಗೆ ಗೌರವ ನೀಡುವ ಕಾರ್ಯವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಬಾಳೇಶ್ವರಮಠ, ತಾ.ಕಾ.ನಿ.ಪ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕಳಸಾಪುರ, ದಿಗಂಬರ ಪೂಜಾರ, ಶಿವಲಿಂಗಯ್ಯ ಹೊತಗಿಮಠ, ಸೋಮಣ್ಣ ಯತ್ನಳ್ಳಿ, ಕರಿಯಪ್ಪ ಶಿರಹಟ್ಟಿ, ಸಿದ್ದು ದುರಗಣ್ಣವರ, ಕಂಪನಿಯ ವ್ಯವಸ್ಥಾಪಕ ಸುದರ್ಶನ ಚಿಕ್ಕಮಠ, ಮುಖ್ಯ ವ್ಯವಸ್ಥಾಪಕ ಮಹಾಂತೇಶ ಚಿಕ್ಕಮಠ, ಸಂಚಾಲಕಿ ನಿವೇದಿತಾ ಚಿಕ್ಕಮಠ ಮುಂತಾದವರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಜುನಾಥ ನಾಟ್ಯ ಸಂಘದ ಮಾಲೀಕ ಮಲ್ಲಿಕಾರ್ಜುನ ಚಿಕ್ಕಮಠ ಮಾತನಾಡಿ, ರಂಗಭೂಮಿಗೆ ಪ್ರೋತ್ಸಾಹದ ಕೊರತೆಯಿಂದ ನಾಟ್ಯ ಸಂಘಗಳು ಮುಚ್ಚಿಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಜನರು ನಾಟಕಗಳನ್ನು ನೋಡುವ ಮೂಲಕ ಬಡ ಕಲಾವಿದರ ಹಾಗೂ ನಾಟಕ ಕಂಪನಿಗಳ ಪೋಷಣೆ ಮಾಡಬೇಕೆಂದು ಮನವಿ ಮಾಡಿದರು.



