ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಕೋಡಿಯಲ್ಲಮ್ಮ ದೇವಿ ದೇವಸ್ಥಾನದ ಜಾತ್ರಾಮಹೋತ್ಸವ ಅಂಗವಾಗಿ ಶನಿವಾರ ದೇವಸ್ಥಾನದ ಬಯಲಿನಲ್ಲಿ ಅಂತಿಮ ಹಂತದ ಮುಕ್ತ ಕುಸ್ತಿ ಪಂದ್ಯಾವಳಿಗಳು ನಡೆದವು. ಮುಸ್ಸಂಜೆಯ ಮಬ್ಬಿನಲ್ಲಿ ನಡೆದ ವಾರಗಿ ಪೈಕಿ-ಪರ್ಸಿ ಪೈಕಿ ಕುಸ್ತಿ ಅಂತಿಮ ಪಂದ್ಯಾವಳಿಯಲ್ಲಿ ಸೆಣಸಿದ ಕಲಿಗಳ ವಿವಿಧ ಭಂಗಿ, ಪಟ್ಟು, ಕರಾಮತ್ತುಗಳು ನೋಡುಗರ ಮೈನವಿರೇಳಿಸುವಂತೆ ಮಾಡಿದವು.
ಅಂತಿಮ ಸುತ್ತಿನ ವಾರಗಿ ಪೈಕಿ ಕುಸ್ತಿಯಲ್ಲಿ ಗುಲಬರ್ಗಾದ ಪೈಲ್ವಾನ್ ಕಿರಣ್‌ರನ್ನು ಸೋಲಿಸಿದ ಚಿಕ್ಕಮಳ್ಳೊಳ್ಳಿಯ ಸತೀಶ ಪೈಲ್ವಾನ್ ಬೆಳ್ಳಿ ಕಡಗ ಮತು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಪರಸಿ ಪೈಕಿ ಕುಸ್ತಿಯಲ್ಲಿ ಲಕ್ಕುಂಡಿಯ ಮುತ್ತು ಪೈಲ್ವಾನ್‌ರೊಂದಿಗೆ ಸೆಣಸಿದ ಬೊಮ್ಮನಹಳ್ಳಿಯ ಪೈಲ್ವಾನ್ ಪ್ರತೀಕ ಬೆಳ್ಳಿ ಕಡಗ ಧರಿಸಿಕೊಂಡರು.
ಸಂಜೆ ಗೆಲುವು ಸಾಧಿಸಿದ ಕುಸ್ತಿ ಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಹಿರಿಯರಾದ ಶಿವನಗೌಡ್ರ ಅಡರಕಟ್ಟಿ, ಕುಸ್ತಿ ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಜಾನಪದ ಶೈಲಿಯ ಗ್ರಾಮೀಣ ಕ್ರೀಡೆಯಾಗಿದೆ. ನಮ್ಮ ಸಂಸ್ಕೃತಿ, ಪರಂಪರೆಯ ಪ್ರತೀಕವಾದ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ-ಬೆಳೆಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಸಂಪ್ರದಾಯದಂತೆ ನಡೆಸಿಕೊಂಡು ಬರಲಾಗುತ್ತಿರುವ ಈ ಕುಸ್ತಿ ಪಂದ್ಯಾವಳಿಯನ್ನು ದೇವಸ್ಥಾನ ಸೇವಾ ಕಮಿಟಿ, ಭಕ್ತಮಂಡಳಿ, ಪಟ್ಟಣದ ಹಿರಿಯರು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ.
ಇಂತಹ ಸಾಂಪ್ರದಾಯಿಕ, ಗ್ರಾಮೀಣ ಕ್ರೀಡೆಗಳ ಆಯೋಜನೆಗೆ ಎಲ್ಲರ ಸಹಾಯ-ಸಹಕಾರ ಅಗತ್ಯ ಎಂದರು.
ಈ ವೇಳೆ ಶಿವಾನಂದಪ್ಪ ಕರೆತ್ತಿನ, ಯಲ್ಲಪ್ಪ ಮುಳಗುಂದ, ಚನ್ನಪ್ಪ ಕರೆತ್ತಿನ, ಚನ್ನಪ್ಪ ಅಣ್ಣಿಗೇರಿ, ಈಶ್ವರಪ್ಪ ಕರೆತ್ತಿನ, ನಾಗೇಶ ಹುಬ್ಬಳ್ಳಿ, ಮಾಂತಪ್ಪ ನಾವಿ, ಕೃಷ್ಣಪ್ಪ ಚವ್ಹಾಣ, ದುಂಡಪ್ಪ ಮುಳಗುಂದ, ಗಂಗಾಧರ ಅಂಕಲಿ, ನಾಗಪ್ಪ ಮುಳಗುಂದ, ವೆಂಕರೆಡ್ಡಿ ಪಾಟೀಲ, ಮಾದೇವಪ್ಪ ಕೊಟಗಿ, ಸೋಮಣ್ಣ ಅಮರಶೆಟ್ಟಿ, ನಾಗಪ್ಪ ಓಂಕಾರಿ, ವಿಠ್ಠಣ್ಣ ಪಾಟೀಲ, ಶಿವಣ್ಣ ಕಟಗಿ, ಅಮರಪ್ಪ ಗುಡಗುಂಟಿ ಸೇರಿ ಹಲವರಿದ್ದರು.
3 ದಿನ ನಡೆದ ಕುಸ್ತಿ ಸೆಣಸಾಟದಲ್ಲಿ ಧಾರವಾಡ, ಹುಬ್ಬಳ್ಳಿ, ಹಾವೇರಿ, ಕೊಲ್ಲಾಪುರ, ಗುಲಬರ್ಗಾ, ಹೊನ್ನಳ್ಳಿ, ಹಿರೇಕೆರೂರ, ಬಾಲೆಹೊಸೂರ, ಬೊಮ್ಮನಹಳ್ಳಿ, ಲಕ್ಕುಂಡಿ, ಜಮಖಂಡಿ, ಕುರ್ತಕೋಟಿ, ಜಕ್ಕಲಿ, ಮುಳಗುಂದ, ಕಣಗಿನಹಾಳ, ಲಕ್ಷ್ಮೇಶ್ವರ ಮತ್ತಿತರರ ಕಡೆಗಳಿಂದ ೫೦ಕ್ಕೂ ಹೆಚ್ಚು ಕುಸ್ತಿ ಪೈಲ್ವಾನರು ಭಾಗವಹಿಸಿದ್ದರು.