ವಿಜಯಸಾಕ್ಷಿ ಸುದ್ದಿ, ಗದಗ: ಜಗದ್ಗುರು ತೋಂಟದರ್ಯ ಮಠದ ಪೀಠಾಧಿಪತಿಗಳಾದ ಡಾ. ಸಿದ್ದರಾಮ ಸ್ವಾಮೀಜಿಗಳು ಎಪ್ರಿಲ್ 6ರಂದು ವ್ಯಸನ ಮುಕ್ತ ಸಮಾಜಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ, ತಮ್ಮದೇ ಮಠದ ಆಸ್ತಿಯಲ್ಲಿ ಬಾರ್ ಆಂಡ್ ರೆಸ್ಟೊರೆಂಟ್ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇತ್ತ ವ್ಯಸನ ಮುಕ್ತ ಸಮಾಜಕ್ಕಾಗಿ ಪಾದಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಈ ಪಾದಯಾತ್ರೆಯನ್ನು ನಾವು ಖಂಡಿಸುತ್ತೇವೆ ಎಂದು ಹಿಂದೂ ವೀರಶೈವ ಯುವ ವೇದಿಕೆಯ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂ. ಸಿದ್ದಲಿಂಗೇಶ್ವರ ಸ್ವಾಮೀಜಿಗಳು ಹೋಟೆಲ್ ಉದ್ಘಾಟನೆಗೆ ಹೋಗಲು ನಿರಾಕರಿಸಿ, ಅನ್ನ ಮಾರುವುದನ್ನು ನಾನು ವಿರೋಧಿಸುತ್ತೇನೆ ಎಂದು ಹೇಳಿದ್ದರು. ಆದರೆ, ಕೆಲವು ದಿನಗಳ ನಂತರ ಬಾರ್ ಆಂಡ್ ರೆಸ್ಟೋರೆಂಟ್ ಉದ್ಘಾಟನೆಗೆ ಹೋಗಿದ್ದರು. ಇದು ಅಂದಿನ ಸ್ವಾಮೀಜಿಗಳ ದ್ವಿಮುಖ ನೀತಿಯನ್ನು ಎತ್ತಿ ತೋರಿಸುತ್ತದೆ. ಜಾತ್ಯಾತೀತ ಮಠ ಎಂದು ಹೇಳಿಕೊಂಡು ಹಿಂದೂ ಸಂಪ್ರದಾಯವನ್ನು ಸ್ವಾಮೀಜಿಗಳು ಹಾಳು ಮಾಡುತ್ತಿದ್ದರು ಎಂದು ಲಿಂಗೈಕ್ಯ ಶ್ರೀಗಳ ವಿರುದ್ಧವೂ ತಮ್ಮ ಆಕ್ರೋಶವನ್ನು ಹೊರಹಾಕಿದರು.
ತೋಂಟದಾರ್ಯ ಮಠದಿಂದ ಈ ಹಿಂದೆ `ಮಠ್ ಬಚಾವೊ, ಬಾರ್ ಹಠಾವೋ’ ಎನ್ನುವ ಘೋಷಣೆಯೊಂದಿಗೆ ಹೋರಾಟವನ್ನು ಆಯೋಜನೆ ಮಾಡಲಾಗಿತ್ತು. ಆದರೆ, ಶ್ರೀಮಠ ಮಾಲೀಕತ್ವದ ಜಾಗದಲ್ಲಿ ಬಾರ್ ತೆರೆಯಲು ಲೀಸ್‌ಗೆ ನೀಡಿದ್ದಾರೆ. ಅಂದರೆ, ಹಣ ಬರುವ ದಾರಿಯಿದ್ದರೆ ಯಾರಿಗಾದರೂ ಲೀಸ್ ಅಥವಾ ಬಾಡಿಗೆಗೆ ನೀಡುತ್ತಾರೆ. ಇತ್ತ ಬೀದಿಗೆ ಬಂದು ವ್ಯಸನ ಮುಕ್ತ ಸಮಾಜಕ್ಕಾಗಿ ಪಾದಯಾತ್ರೆ ಎಂದು ಹೇಳುತ್ತಾರೆ. ಅಷ್ಟೆ ಅಲ್ಲದೆ, ತೋಂಟದಾರ್ಯ ಮಠದ ಜಾತ್ರೆ ವ್ಯಾಪಾರ ಕೇಂದ್ರವಾಗಿದೆ. ಜಾತ್ರೆಯಲ್ಲಿ ಹಿಂದೂಗಳಿಗಿಂತ ಅನ್ಯಧರ್ಮೀಯ ವ್ಯಾಪಾರಸ್ಥರೇ ಹೆಚ್ಚು ಇರುತ್ತಾರೆ. ಒಂದು ತಿಂಗಳಿಗೂ ಹೆಚ್ಚು ಕಾಲ ಇಲ್ಲಿ ದೇಶದ ನಾನಾ ರಾಜ್ಯಗಳಿಂದ ಬಂದು ವ್ಯಾಪಾರ ಮಾಡುತ್ತಾರೆ. ಇದರಿಂದ ಸ್ಥಳೀಯ ವ್ಯಾಪಾರಸ್ಥರು ಸಂಕಷ್ಟ ಎದುರಿಸುತ್ತಾರೆ ಎಂದು ಕಿಡಿ ಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವನಾಥ ಶೀರಿ, ಸತೀಶ್ ಕುಂಬಾರ, ಶಿವಯೋಗಿ ಹಿರೇಮಠ, ವೆಂಕಟೇಶ ದೋಡ್ಡಮನಿ, ಕುಮಾರ ನಡಗೇರಿ, ಕಿರಣ್ ಹಿರೇಮಠ, ಸಂತೋಷ ಹುಯಿಲಗೋಳ, ಪುಟ್ಟರಾಜ ಮುರುಸುಳಿನ ಉಪಸ್ಥಿತರಿದ್ದರು.
ಜಗದ್ಗುರು ತೋಂಟದಾರ್ಯ ಮಠದ ಮುಖ್ಯ ದ್ವಾರ ಬಾಗಿಲ ಮೇಲೆ ಆಕರ್ಷಕ ನಂದಿ ಇದೆ. ಇದು ನಮ್ಮ ಪರಂಪರೆಯೂ ಹೌದು. ಆದರೆ, ನಾವು ಆರಾಧಿಸುವ ನಂದಿಯನ್ನು ಕೊಂದು ತಿನ್ನುವವರನ್ನು ತೋಂಟದಾರ್ಯ ಮಠದ ಶ್ರೀಗಳು ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ. ಇದು ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದೆ. ನಂದಿಯನ್ನು ಕೆಳಗಿಳಿಸಲಿ ಅಥವಾ ನಂದಿ ತಿನ್ನುವವರಿಂದ ಶ್ರೀಗಳು ದೂರವಿರಲಿ.
– ರಾಜು ಖಾನಪ್ಪನವರ.
ರಾಜ್ಯ ಸಂಚಾಲಕ,
ಹಿಂದೂ ವೀರಶೈವ ಯುವ ವೇದಿಕೆ.