ಯೋಜನೆಗಳ ಸೌಲಭ್ಯ ಅರ್ಹರಿಗೆ ಸಂಪೂರ್ಣವಾಗಿ ದೊರಕಲಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚಗ್ಯಾರಂಟಿ ಯೋಜನೆಗಳು ಬಡಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶ ಹೊಂದಿದ್ದು, ಈ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸುವಲ್ಲಿ ವಿಳಂಬವಾಗಬಾರದು. ಗ್ಯಾರಂಟಿ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದಲ್ಲಿ ದೊರಕುವಂತಾಗಬೇಕು. ಯೋಜನೆಗಳ ಪ್ರಗತಿ ಶೇ.100ರಷ್ಟು ಸಾಧಿಸಲು ಸಂಬಂಧಿತ ಅಧಿಕಾರಿಗಳು ಆಸಕ್ತಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಗದಗ ತಾಲೂಕು ಮಟ್ಟದ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಸೂಚಿಸಿದರು.

Advertisement

ನಗರದ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿರುವ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಕಚೇರಿಯಲ್ಲಿ ಗುರುವಾರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಂಚ ಗ್ಯಾರಂಟಿ ಯೋಜನೆ ಲಭಿಸುವಲ್ಲಿ ಫಲಾನುಭವಿಗಳಿಗೆ ಅಡಚಣೆಗಳು ಉಂಟಾದರೆ ಅಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಪ್ರತಿನಿಧಿಗಳ ಸಹಕಾರ ಈ ನಿಟ್ಟಿನಲ್ಲಿ ಸದಾ ಇರುತ್ತದೆ. ಮಹಿಳೆಯರು ಶಕ್ತಿ ಯೋಜನೆ ಸೌಲಭ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಗದಗ ಬೆಟಗೇರಿಯಲ್ಲಿ ಸಾರ್ವಜನಿಕರಿಗೆ ಸಿಟಿ ಬಸ್‌ನ ಸಂಚಾರಕ್ಕೆ ಅನುಕೂಲವಾಗುವಂತೆ ಅವಶ್ಯಕ ಸ್ಥಳಗಳ ರೂಟ್ ಮ್ಯಾಪ್ ತಯಾರಿಸಿಕೊಂಡು ಹೆಚ್ಚುವರಿಯಾಗಿ ಸಿಟಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದರು.

ಯುವನಿಧಿ ಯೋಜನೆಯ ದುರುಪಯೋಗವಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನಡೆಸಿ ಅರ್ಹರು ಇದರ ಲಾಭ ಪಡೆಯುವಂತಾಗಬೇಕು ಎಂದು ಅಶೋಕ ಮಂದಾಲಿ ತಿಳಿಸಿದರು.

ಗೃಹಲಕ್ಷ್ಮೀ ಯೋಜನೆಯಡಿ ಮೇ 2025ರವರೆಗೆ ಗದಗ ತಾಲೂಕಿನಲ್ಲಿ 81073 ನೋಂದಣಿಯಾದ ಅರ್ಜಿಗಳ ಪೈಕಿ 80588 ಅರ್ಜಿಗಳಿಗೆ ಮಂಜೂರಾತಿ ದೊರೆತಿದ್ದು, ಶೇ 99.4ರಷ್ಟು ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ವಾ.ಕ.ರ.ಸಾ ಸಂಸ್ಥೆಯಿಂದ ಗದಗ ಘಟಕದಲ್ಲಿ ಶಕ್ತಿ ಯೋಜನೆಯಡಿ 687251977 (6872.52 ಲಕ್ಷ) ಮಹಿಳಾ ಪ್ರಯಾಣಿಕರ ಆದಾಯವಾಗಿದೆ. ಅನ್ನಭಾಗ್ಯ ಯೋಜನೆಯಡಿ ಗದಗ-ಬೆಟಗೇರಿಯಲ್ಲಿ ಜುಲೈ 2025ರ ಮಾಹೆಯಲ್ಲಿ ರಾಜ್ಯ ಸರಕಾರಿ ಅನ್ನಭಾಗ್ಯ ಹಂಚಿಕೆ ಯೋಜನೆಯಡಿ ಒಟ್ಟು 32686 ಪಡಿತರ ಕಾರ್ಡುಗಳಿದ್ದು (ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ಗಳು) 5536,05 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ. ಗದಗ ಗ್ರಾಮೀಣ ಭಾಗದಲ್ಲಿ ಒಟ್ಟು 48373 ಪಡಿತರ ಕಾರ್ಡುಗಳಿದ್ದು (ಅಂತ್ಯೋದಯ ಮತ್ತು ಬಿಪಿಎಲ್) 7478.75 ಕ್ವಿಂಟಲ್ ಹಂಚಿಕೆ ಮಾಡಲಾಗಿದೆ ಎಂದು ಸಂಬಂಧಿತ ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮಲ್ಲಯ್ಯ ಕೆ, ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರುಗಳಾದ ಶಂಭು ಕಾಳೆ, ಸಾವಿತ್ರಿ ಹೂಗಾರ, ಸಂಗು ಕೆಕರಲಮಟ್ಟಿ, ಎನ್.ಬಿ. ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿನಾಯ್ಕರ, ದೇವರಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ ಚಿಂಚಲಿ, ಗಣೇಶ ಸಿಂಗ್ ಮಿಟಾಡೆ, ಮಲ್ಲಪ್ಪ ಬಾರಕೇರ, ಭಾಷಾ ಮಲ್ಲಸಮುದ್ರ ಹಾಗೂ ಅಧಿಕಾರಿಗಳು ಹಾಜರಿದ್ದರು.

ಗದಗ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯ ಕೃಷ್ಣಗೌಡ ಎಚ್.ಪಾಟೀಲ ಮಾತನಾಡಿ, ಪಡಿತರ ಅಂಗಡಿಗಳ ಮುಂದೆ ಪಂಚ ಗ್ಯಾರಂಟಿ ಯೋಜನೆಯನ್ನು ಬಿಂಬಿಸುವ ಫಲಕವನ್ನು ಪ್ರದರ್ಶಿಸಬೇಕು. ಅನ್ನಭಾಗ್ಯ ಯೋಜನೆಯಿಂದ ಅರ್ಹ ಫಲಾನುಭವಿಗಳು ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.

ಗೃಹಜ್ಯೋತಿ ಯೋಜನೆಯಡಿ ಜಯಲೈ ಅಂತ್ಯದವರೆಗೆ ಗದಗ ಶಹರ ಉಪವಿಭಾಗದಲ್ಲಿ 48199 ಸ್ಥಾವರಗಳು ಅರ್ಹವಾಗಿದ್ದು, ಶೇ. 99.58 ಪ್ರಗತಿಯಾಗಿದೆ. ಗದಗ ಗ್ರಾಮೀಣ ಉಪವಿಭಾಗದಲ್ಲಿ 53268 ಸ್ಥಾವರಗಳು ಅರ್ಹವಾಗಿದ್ದು, ಶೇ. 99.63 ಪ್ರಗತಿಯಾಗಿದೆ. ಯುವನಿಧಿ ಯೋಜನೆಯಡಿ ಗದಗ ತಾಲೂಕಿನಲ್ಲಿ ಆಗಸ್ಟ್ 12ರವರೆಗೆ 2184 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಅದರಲ್ಲಿ 1451 ಅರ್ಹ ಫಲಾನುಭವಿಗಳಿಗೆ ಡಿ.ಬಿ.ಟಿ ಮೂಲಕ ಹಣ ವರ್ಗಾವಣೆಯಾಗಿದೆ ಎಂದು ಸಂಬಂಧಿತ ಅಧಿಕಾರಿಗಳು ಮಾಹಿತಿ ಒದಗಿಸಿದರು.


Spread the love

LEAVE A REPLY

Please enter your comment!
Please enter your name here