HomeKarnataka Newsಬೆಂಗಳೂರಿನ ಘಟನೆ ಕರ್ನಾಟಕದ ಘನತೆಗೆ ಕಪ್ಪು ಮಸಿ ಬಳಿದಿದೆ: ಸಿಎಂಗೆ 3 ಪುಟದ ಬಹಿರಂಗ ಪತ್ರ...

ಬೆಂಗಳೂರಿನ ಘಟನೆ ಕರ್ನಾಟಕದ ಘನತೆಗೆ ಕಪ್ಪು ಮಸಿ ಬಳಿದಿದೆ: ಸಿಎಂಗೆ 3 ಪುಟದ ಬಹಿರಂಗ ಪತ್ರ ಬರೆದ ವಿಜಯೇಂದ್ರ

For Dai;y Updates Join Our whatsapp Group

Spread the love

ಬೆಂಗಳೂರು: ಬೆಂಗಳೂರಿನ ಘಟನೆ ಕರ್ನಾಟಕದ ಘನತೆಗೆ ಕಪ್ಪು ಮಸಿ ಬಳಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ 3 ಪುಟದ ಬಹಿರಂಗ ಪತ್ರ ಬರೆದಿದ್ದು, ಅದರಲ್ಲಿ ಸಿಎಂ ಸಿದ್ದರಾಮಯ್ಯ ನಡೆ, ನುಡಿ, ಕೈಗೊಂಡ ಕ್ರಮ, ವೈಫಲ್ಯ, ಪೋಲೀಸ್ ಅಮಾನತ್ತನ್ನು ಖಂಡಿಸಿದ್ದಾರೆ.

ಕಳೆದ ಜೂನ್ 4 ಕರ್ನಾಟಕದ ಇತಿಹಾಸದಲ್ಲಿ ಕರಾಳ ಅಧ್ಯಾಯದ ದಿನ. ಕ್ರಿಕೆಟ್ ಅಭಿಮಾನದ ಲಾಭಗಳಿಸುವ ಸ್ವಾರ್ಥದ ದುರಾಲೋಚನೆಯಿಂದ ನೀವು ಮತ್ತು ನಿಮ್ಮ ಸರ್ಕಾರ ತೆಗೆದುಕೊಂಡ ಬೇಜವಾಬ್ದಾರಿ ಹಾಗೂ ಹೊಣೆಗೇಡಿತನದ ನಿರ್ಧಾರದಿಂದಾಗಿ ಅಮಾಯಕ ಯುವಜೀವಗಳು ಬಲಿಯಾಗಿವೆ.

ಜಮಾವಣೆಗೊಂಡಿದ್ದ ಸಾವಿರಾರು ಜನರು ನೋವು-ಸಂಕಷ್ಟವನ್ನು ಅನುಭವಿಸಿದ್ದಾರೆ. ಕುಟುಂಬ ಬೆಳಗಬೇಕಿದ್ದ. ಉಜ್ವಲ ಭವಿಷ್ಯದ ಕನಸು ಕಂಡಿದ್ದ 11 ಯುವ ಜನರ ಸಾವು ಆ ಕುಟುಂಬಗಳ ನೆಮ್ಮದಿಯನ್ನು ಕಿತ್ತುಕೊಂಡು ಹೆತ್ತವರು ನಿತ್ಯ ಕಣ್ಣೀರಿಡುವಂತಾಗಿದೆ. ಇಡೀ ಘಟನೆಯಿಂದಾಗಿ ಈ ಕ್ಷಣಕ್ಕೂ ಇಡೀ ರಾಜ್ಯ ಮಮ್ಮಲ ಮರುಗುತ್ತಿದೆ ಎಂದಿದ್ದಾರೆ.

ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಘಟನೆ, ಕರ್ನಾಟಕದ ಘನತೆಗೆ ಕಪ್ಪು ಮಸಿ ಬಳಿದಿದೆ. ನಮ್ಮ ರಾಜ್ಯ ಅಸುರಕ್ಷತೆಯ ತಾಣ ಎಂಬ ಸಂದೇಶ ರವಾನೆಯಾಗಿದೆ. ಇಷ್ಟಾಗಿಯೂ ‘ಸರ್ಕಾರಕ್ಕೂ ಈ ಘಟನೆಗೂ ಸಂಬಂಧವಿಲ್ಲ. ಸರ್ಕಾರ ಈ ಘಟನೆಯ ಜವಾರಿಯನ್ನು ಹೊರಲಾಗದು’ ಎಂಬ ನಿಮ್ಮ ಹೇಳಿಕೆ ಪಲಾಯನವಾದ ಹಾಗೂ ನಿರ್ಲಜ್ಜತನದ ಹೊಣೆಗೇಡಿತನವನ್ನು ಪ್ರತಿಬಿಂಬಿಸುತ್ತಿದೆ. ಅಧಿಕಾರಕ್ಕೆ ಅಂಟಿಕೊಳ್ಳುವ ಭಂಡತನದ ನಿಮ್ಮ ನಡೆ ಪರಂಪರೆಯ ಕರ್ನಾಟಕದ ನೈತಿಕ ರಾಜಕಾರಣವನ್ನು ಅವಮಾನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಕಾರ್ಯಕ್ರಮದಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ. ಆದ್ದರಿಂದ ಇದರಲ್ಲಿ ಸರ್ಕಾರದ ಯಾವ ತಪ್ಪಿಲ್ಲ. ದುರ್ಘಟನೆ ನಡೆದಿರುವುದು ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಎಂದು ಹೇಳಿಕೆ ನೀಡಿದ್ದೀರಿ. ಸುದೀರ್ಘ ರಾಜಕಾರಣ ಹಾಗೂ ಅಧಿಕಾರದ ಅನುಭವ ಹೊಂದಿರುವ ನಿಮ್ಮ ಬಾಯಿಂದ ಹೊರಟಿರುವ ಇಂಥಾ ಮಾತುಗಳಿಂದಾಗಿ ನಿಮ್ಮ ಪ್ರಬುದ್ಧತೆಯನ್ನು ನಾವು ಶಂಕಿಸುವಂತಾಗಿದೆ ಎಂದು ಹೇಳಿದ್ದಾರೆ.

ನಿಮ್ಮ ಹೇಳಿಕೆಯಿಂದಾಗಿ ನೀವು ಇಡೀ ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ವಿಧಾನಸೌಧಕ್ಕೆ ಮಾತ್ರ ಮುಖ್ಯಮಂತ್ರಿಯೋ ಎಂಬ ಪ್ರಶ್ನೆ ಕಾಲ್ತುಳಿತದಲ್ಲಿ ನೊಂದವರು ಕೇಳುತ್ತಿದ್ದಾರೆ. ಪೊಲೀಸರ ರಕ್ಷಣೆ ನಿಮಗೆ, ನಿಮ್ಮ ಮಂತ್ರಿ ಮಂಡಲಕ್ಕೆ, ನಿಮ್ಮ ಕುಟುಂಬಕ್ಕೆ, ನಿಮ್ಮ ಅಧಿಕಾರಿಗಳಿಗೆ ಮಾತ್ರ ಹೊರತೂ ಸ್ಟೇಡಿಯಂ ಬಳಿಯ ದುರಂತದಲ್ಲಿ ಸಾವು-ನೋವು ಅನುಭವಿಸಿದ ಜನಸಾಮಾನ್ಯರಿಗಲ್ಲ ಎಂಬುದು ನಿಮ್ಮ ಮಾತಿನ ಧಾಟಿಯಲ್ಲಿ ವ್ಯಕ್ತವಾಗುತ್ತಿದೆ.

ಕೂಗಳತೆಯ ದೂರದಲ್ಲಿ ಈ ದುರಂತ ಘಟನೆ ನಡೆದರೂ ಎರಡು ಗಂಟೆಯ ಅಂತರದವರೆಗೂ (3.50 ರಿಂದ 5.45) ತಮಗೆ ದುರಂತದ ಕುರಿತು ಮಾಹಿತಿ ಸಿಗಲಿಲ್ಲ ಎಂಬ ನಿಮ್ಮ ಹೇಳಿಕೆ ಗಮನಿಸಿದರೆ ಆಡಳಿತ ವ್ಯವಸ್ಥೆ ನಿಮ್ಮ ಕೈತಪ್ಪಿ ದಿಕ್ಕೆಟ್ಟು ಹೋಗಿದೆ ಎಂಬುದು ವೇದ್ಯವಾಗುತ್ತದೆ. ಇಂತಹ ದುರ್ಬಲ ಸಮರ್ಥನೆಯ ಮೂಲಕ ನೀವು ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು ಎಂದಿದ್ದಾರೆ.

ಪೋಲಿಸ್ ಅಧಿಕಾರಿಗಳ ಮುನ್ನೆಚ್ಚರಿಕೆಯ ಸ್ಪಷ್ಟ ಸೂಚನೆಯ ಪತ್ರವನ್ನು ಕಣ್ಣೆತ್ತಿಯೂ ನೋಡದೆ ಪಕ್ಕಕ್ಕೆ ಸರಿಸಿದ ನಿಮ್ಮ ಇಡೀ ಅಧಿಕಾರ ವ್ಯವಸ್ಥೆ “ಕ್ರಿಕೆಟಿಗರ ಸನ್ಮಾನ ಸಮಾರಂಭಕ್ಕೆ ಹರಿದು ಬರುವ ಜನಸಾಗರದ ಮೆಚ್ಚುಗೆಯನ್ನು ಪಡೆಯಬೇಕೆಂಬ ರಾಜಕೀಯ ಉನ್ಮಾದದಲ್ಲಿ ತೇಲಿಹೋಗಿತ್ತು”. ಇದರ ಪರಿಣಾಮವಾಗಿ ಯೋಜಿತವಲ್ಲದ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಉಂಟಾಗಬಹುದಾದ ಅವಘಡಗಳನ್ನು ಪರಾಮರ್ಶಿಸದೇ, ಏಕಪಕ್ಷೀಯ ಸರ್ವಾಧಿಕಾರಿ ಶದಿಂದಾಗಿ ಅಧಿಕಾರಿಗಳು ನಿಸ್ಸಹಾಯಕರಾಗಿ ಅದನ್ನು ಪಾಲಿಸುವ ಅನಿವಾರ್ಯತೆಗೆ ಸಿಲುಕಿದ್ದುಲೀ ಸತ್ಯ ಎಂಬುದು ಇಡೀ ರಾಜ್ಯದ ಜನತೆಗೇ ತಿಳಿದಿದೆ.

“ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು” ಎಂಬಂತೆ ಬೆಂಗಳೂರು ಪೋಲಿಸ್ ಆಯುಕ್ತರೂ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತ್ತುಗೊಳಿಸಿ, ಜನರ ಆಕ್ರೋಶವನ್ನು ತಣಿಸಬಹುದು ಎಂಬ ದುರಾಲೋಚನೆಯಿಂದ ಅವರನ್ನು ಬಲಿಪಶು ಮಾಡಿದಿರಿ. ನೀವು, ನಿಮ್ಮ ಉಪ-ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳ ಬೇಜವಾಬ್ದಾರಿತನದಿಂದಾಗಿ ಹಾಗೂ ನಿಮ್ಮ ಸುತ್ತಲಿನ ಭಟ್ಟಂಗಿಗಳ ಸಲಹೆಯನ್ನು ಅನುಸರಿಸಲಾಗಿ ಇಂತಹ ಘೋರ ಘಟನೆ ಸಂಭವಿಸಿತು ಎಂಬುದು “ಅಂಗೈ ಹುಣ್ಣಿನಷ್ಟೇ” ನಿಖರವಾಗಿದೆ.

ಗೌರವಾನ್ವಿತ ಮುಖ್ಯಮಂತ್ರಿಗಳಾಗಿದ್ದ ಎಸ್. ನಿಜಲಿಂಗಪ್ಪನವರು, ವೀರೇಂದ್ರ ಪಾಟೀಲರು, ಡಿ. ದೇವರಾಜ ಅರಸರು, ರಾಮಕೃಷ್ಣ ಹೆಗಡೆಯವರು, ಎಸ್.ಆರ್. ಬೊಮ್ಮಾಯಿರವರು. ಹೆಚ್. ಡಿ. ದೇವೇಗೌಡರು, ಜಿ. ಹೆಚ್. ಪಟೇಲ್‌ರವರು. ಎಸ್. ಎಂ. ಕೃಷ್ಣರವರು ಹಾಗೂ ಬಿ.ಎಸ್. ಯಡಿಯೂರಪ್ಪನವರು ಸೇರಿದಂತೆ ಇತರರು ಮುಖ್ಯಮಂತ್ರಿಗಳ ಸ್ಥಾಗಿನಲ್ಲಿ ಕುಳಿತು ಕರ್ನಾಟಕದ ಜನರ ಹೃದಯದಲ್ಲಿ ಶಾಶ್ವತ ಗೌರವ-ಅಭಿಮಾನಗಳನ್ನು ಉಳಿಸಿಕೊಂಡಿದ್ದಾರೆ. ಪರಂಪರೆ ಮುಂದುವರೆಯಬೇಕೆನ್ನುವುದು ಕರ್ನಾಟಕದ ಜನತೆಯ ಅಭಿಪ್ರಾಯವಾಗಿದೆ. ಇದಕ್ಕೆ ಅಪಚಾರವಾಗದಂತೆ ತಾವು ನಡೆದುಕೊಳ್ಳಬೇಕೆಂದು ಒತ್ತಾಯಿಸಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!