ಬೆಳಗಾವಿ: ದ್ವೇಷ ಭಾಷಣ ನಿಯಂತ್ರಣ ಮಸೂದೆ ಮೂಲಕ ಕಾಂಗ್ರೆಸ್ ಸರ್ಕಾರವು ವಿಪಕ್ಷಗಳ ಧ್ವನಿಯನ್ನು ಅಡಗಿಸಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಮಸೂದೆ ಮೂಲಕ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದವರನ್ನೂ ಹತ್ತಿಕ್ಕಿ, 7–8 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸುವ ದುಸ್ಸಾಹಸ ನಡೆಯುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಟೀಕಿಸಿದ ಅವರು, ಇದನ್ನು ಬಿಜೆಪಿ ತೀವ್ರವಾಗಿ ವಿರೋಧಿಸಲಿದೆ ಎಂದರು. ವಿಧಾನಸಭಾ ಸ್ಪೀಕರ್‌ಗಳು ಕೂಡ ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಚಿವ ಬೈರತಿ ಸುರೇಶ್ ಅವರು ಕರಾವಳಿ ಭಾಗದ ಮತದಾರರಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದರು.
ಸದನ ಆರಂಭವಾದ ಬಳಿಕ ಈ ಮಸೂದೆ ಕುರಿತು ಚರ್ಚೆ ನಡೆಸುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದ ವಿಜಯೇಂದ್ರ, ಕಾಂಗ್ರೆಸ್ ಸರ್ಕಾರದ ನಡೆ 1975ರ ತುರ್ತು ಪರಿಸ್ಥಿತಿಯನ್ನು ನೆನಪಿಸುವಂತಿದೆ ಎಂದು ಟೀಕಿಸಿದರು. ಮಂಡ್ಯ ಜಿಲ್ಲೆಯ ಸ್ವಾತಂತ್ರ್ಯ ಯೋಧರಿಗೆ ಕಳೆದ 8 ತಿಂಗಳಿಂದ ಗೌರವಧನ ನೀಡಿಲ್ಲ. ಖಜಾನೆ ಖಾಲಿಯಾಗಿದೆಯೇ ಎಂಬ ಪ್ರಶ್ನೆ ಎದ್ದುಬರುತ್ತಿದೆ ಎಂದು ಹೇಳಿದರು. ಯಾರಿಗೂ ಬೆದರಿಕೆ ಹಾಕುವ ರಾಜಕೀಯವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ತಾನು ಜನಪ್ರತಿನಿಧಿ ಹಾಗೂ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷನೆಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.



