ರಾಮನಗರ: ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ತಮಗೆ ಸಮಾಧಾನಕರವಾಗಿಲ್ಲ ಎಂದು ಶಾಸಕ ಇಕ್ಬಾಲ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಮನಗರ ಜಿಲ್ಲೆಯ ಮೊಟ್ಟೆದೊಡ್ಡಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಕ್ಷೇತ್ರದ ಹಲವು ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗೆ ಮನವಿ ಮಾಡಿದ್ದರೂ ಬಜೆಟ್ನಲ್ಲಿ ಸೂಕ್ತ ಅನುದಾನ ನೀಡಲಾಗಿಲ್ಲ ಎಂದು ಹೇಳಿದರು.
ಭಕ್ಷಿಕೆರೆ ಒಡೆದು ಉಂಟಾದ ಪ್ರವಾಹ ಸಮಸ್ಯೆ ಕುರಿತು ಫೋಟೋಗಳನ್ನು ತೋರಿಸಿ ಮಾಹಿತಿ ನೀಡಿದ್ದೆ. ಹಿಂದಿನ ಜನಪ್ರತಿನಿಧಿಗಳು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದು ಹೇಳಿದರು.
ರಸ್ತೆ, ಚರಂಡಿ ಮತ್ತು ನೀರಾವರಿ ಸಮಸ್ಯೆಗಳ ಕುರಿತು ನಾಲ್ಕೈದು ಬಾರಿ ಮನವಿ ಮಾಡಿದ್ದೆ. ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡುವಂತೆ ಕೇಳಿದ್ದರೂ ಮುಖ್ಯಮಂತ್ರಿ ಯಾವುದೇ ಕ್ರಮ ಕೈಗೊಂಡಿಲ್ಲ. ಪಾರದರ್ಶಕವಾಗಿ ಅನುದಾನ ದೊರೆಯುತ್ತದೆ ಎಂಬ ನಂಬಿಕೆ ಇತ್ತು, ಆದರೆ ಅದು ನೆರವೇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈಗ ಕ್ಷೇತ್ರದ ಅಭಿವೃದ್ಧಿಗಾಗಿ ಉಪ ಮುಖ್ಯಮಂತ್ರಿ ಅವರನ್ನೇ ಸಂಪರ್ಕಿಸಬೇಕಾಗಿದೆ. ಹಿಂದೆ ಅವರ ಸಹಕಾರದಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿಕೊಂಡಿದ್ದೆ. ಇದು ಅವರ ಜಿಲ್ಲೆಯೂ ಆಗಿರುವುದರಿಂದ ಮುಂದೆಯೂ ಅವರ ಮೇಲೆಯೇ ಜವಾಬ್ದಾರಿ ಇರಲಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.



