ವಿಜಯಸಾಕ್ಷಿ ಸುದ್ದಿ, ಮುಳಗುಂದ: ವಿಜಾಪೂರದ ಸಿದ್ದೇಶ್ವರ ಸ್ವಾಮೀಜಿ ಆಚಾರ-ವಿಚಾರಗಳಿಂದ ಶ್ರೀಮಂತರಾದವರು. ಆದರ್ಶ ಮೌಲ್ಯಗಳು, ಪರಂಪರೆಗಳನ್ನು ಅಲ್ಲಮ ಪ್ರಭುವಿನ ವಚನ ಸಾಹಿತ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದವರು. ಇಂದ್ರಿಯ ನಿಗ್ರಹ, ಮನಸ್ಸಿನ ನಿಯಂತ್ರಣ, ಮಾತುಗಳು, ಕಾಯಕ ತತ್ವಗಳ ಮೂಲಕ ಸಾರ್ಥಕವಾಗಿ ಬದುಕಿ ಬಾಳಿ ನಮಗೆಲ್ಲಾ ಮಾರ್ಗದರ್ಶನ ನೀಡಿದವರು. ಇಂತಹ ಮಹನೀಯರ ಹಾದಿಯಲ್ಲಿ ದಿ. ಸಿ.ಬಿ. ಬಡ್ನಿ ಅವರು ಸೇರುತ್ತಾರೆ ಎಂದು ಆರ್.ಎನ್. ದೇಶಪಾಂಡೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯ ಆರ್.ಎಂ. ಕಲ್ಲನಗೌಡರ ಹೇಳಿದರು.
ಅವರು ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ ಮತ್ತು ದಿ. ಸಿ.ಬಿ. ಬಡ್ನಿ ಪ್ರತಿಷ್ಠಾನದಿಂದ ಮನೆ ಮನದಲ್ಲಿ ಶರಣ ಸಂಸ್ಕೃತಿ ಹಾಗೂ ದಿ. ಸಿ.ಬಿ. ಬಡ್ನಿ ಅವರ ಜನ್ಮದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ದಿ. ಸಿ.ಬಿ. ಬಡ್ನಿ ಅವರ ಪ್ರತಿಷ್ಠಾನದಿಂದ ಕೊಡಮಾಡಲಾದ ಸಮಾಜಮುಖಿ ಕಾಯಕಯೋಗಿ ಪ್ರಶಸ್ತಿ ಸ್ವೀಕರಿಸಿದ ಗುರುಸಿದ್ದಪ್ಪ ಕೊರವಣ್ಣವರ ಮಾತನಾಡಿ, ಸಾವಯವ ಕೃಷಿಯಲ್ಲಿ ಲಾಭವಿಲ್ಲ ಎಂದು ಸಾಕಷ್ಟು ಜನರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆದರೆ, ಸಾವಯವ ಕೃಷಿಯಿಂದ ಉತ್ತಮ ಇಳುವರಿ ಜೊತೆಯಲ್ಲಿ ಸಾಕಷ್ಟು ಲಾಭದಾಯಕ ಉದ್ಯೋಗಗಳನ್ನು ಮಾಡಲು ಸಾಧ್ಯವಾಗುತ್ತದೆ. ಸಾವಯವ ಕೃಷಿಯಲ್ಲಿ ಆರೋಗ್ಯ ಅಡಗಿದೆ. ಪ್ರತಿಯೊಬ್ಬರೂ ಸಾವಯವ ಕೃಷಿ ಮಾಡಿದಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಎಸ್.ಎಂ. ನೀಲಗುಂದ ಮಾತನಾಡಿ, ದಿ. ಸಿ.ಬಿ. ಬಡ್ನಿ ಅವರ ಹೆಸರಿನಲ್ಲಿ ಪ್ರತಿಷ್ಠಾನ ಮಾಡಿ ಸಮಾಜಮುಖಿ ಕಾಯಕಯೋಗಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನಿಯವಾಗಿದ್ದು, ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ ಎಂದರು.
ಡಾ. ಎಸ್.ಸಿ. ಚವಡಿ, ಡಾ. ಆರ್.ಎಂ. ಕಲ್ಲನಗೌಡರ, ಎಸ್.ಎಂ. ನೀಲಗುಂದ, ಎಸ್.ಸಿ. ಬಡ್ನಿ, ಗುರುಸಿದ್ದಪ್ಪ ಕೊರವಣ್ಣವರ, ಗೌರಮ್ಮಾ ಬಡ್ನಿ, ಜನ್ನತಬಿ ದಂಡಿನ, ರಾಜೇಶ್ವರಿ ಬಡ್ನಿ ಇದ್ದರು.
ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಂಜುನಾಥ ಮಟ್ಟ ಮಾತನಾಡಿ, ಸಮಾಜಮುಖಿ ಕಾಯಕ ಯೋಗಿ ಪ್ರಶಸ್ತಿ ಪಡೆದ ಜನ್ನತಬಿ ದಂಡಿನ ಅವರು ನಿಸ್ವಾರ್ಥ ಸೇವೆಯಿಂದ ಮುಳಗುಂದ ಪಟ್ಟಣದ ಮಹಾ ತಾಯಿಯಾಗಿದ್ದಾರೆ. ಇಂದಿನ ತಲೆಮಾರಿನವರು ತಂದೆ-ತಾಯಿಗಳನ್ನು ಮರೆಯುತ್ತಿದ್ದಾರೆ. ತಂದೆ-ತಾಯಿಗಳು ನಮಗೆಲ್ಲರಿಗೂ ಸಾಕ್ಷಾತ್ ದೇವರು. ಅವರ ಸೇವೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.



