ವಿಜಯಸಾಕ್ಷಿ ಸುದ್ದಿ, ಗದಗ: ರೈತರ ಅನುಕೂಲಕ್ಕಾಗಿ ಸರ್ಕಾರ ಜಾರಿಗೊಳಿಸಿದ ಬೆಳೆ ವಿಮೆ ಯೋಜನೆಯನ್ನೂ ಬಿಡದೇ, ರೈತರಿಗೂ, ಸರ್ಕಾರಕ್ಕೂ ಮೋಸ ಮಾಡುತ್ತಿರುವ ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿಗಳು ಬಯಲಾಗತೊಡಗಿವೆ. ಅಖಂಡ ಧಾರವಾಡ ಜಿಲ್ಲೆಯಲ್ಲಿ ರೈತರ ಹೆಸರಿನಲ್ಲಿ ಈಗಾಗಲೇ ನಡೆದ, ನಡೆಯುತ್ತಿರುವ ಬೆಳೆವಿಮೆ ಪರಿಹಾರದ ಫಿಪ್ಟಿ-ಫಿಪ್ಟಿ ದಂಧಗೆ ಕಿಂಗ್‌ಪಿನ್ ಆಗಿರುವುದು ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿಯ ಓರ್ವ ಸದಸ್ಯ ಎಂದು ಹೇಳಲಾಗುತ್ತಿದೆ.
ಈ ಆಸಾಮಿ ನೂರಾರು ಎಕರೆ ಜಮೀನು ಹೊಂದಿದ್ದು, ಬೇರೆ ಬೇರೆ ತಾಲೂಕಿನ ಶ್ರೀಮಂತ ರೈತರೊಂದಿಗೆ ಕೈಜೋಡಿಸಿ ವಂಚನೆಯ ಜಾಲ ಬೀಸಿರುವ ಸಂಗತಿ ರಹಸ್ಯವಾಗಿಯೇನೂ ಉಳಿದಿಲ್ಲ. ಗದಗ ಶಹರದಲ್ಲಿನ ಯುವ ರಾಜಕಾರಣಿ, ಅದೂ ಅಕ್ಕಿ ದಂಧೆಯ ರೂವಾರಿಯೊಬ್ಬ ಈ ಗ್ರಾಮ ಪಂಚಾಯಿತಿ ಸದಸ್ಯನ ಜೊತೆಗೂಡಿ, ಕೋಟಿ ಕೋಟಿ ಹಣವನ್ನ ಲೂಟಿ ಹೊಡೆಯುತ್ತಿದ್ದಾರೆ. ಯಾರದ್ದೋ ದುಡ್ಡಿನಲ್ಲಿ ಜಾತ್ರೆ ಮಾಡುತ್ತ ಈ ಇಬ್ಬರೂ ಗದಗ ಜಿಲ್ಲೆಯಲ್ಲಿ ಐಷಾರಾಮಿ ಜೀವನ ನಡೆಸಲು ಮುಂದಾಗುತ್ತಿರುವುದು ಸಾರ್ವಜನಿಕರಿಗೆ ತಿಳಿಯದ ವಿಷಯವೇ?!
ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಹೆಸರು ಬೆಳೆಗೆ ವಿಮೆ ಮಾಡಿಸಿದ ರೈತರು ಹವಾಮಾನ ವೈಪರಿತ್ಯ, ಕೀಟಬಾಧೆಯಿಂದ ಕೈಸುಟ್ಟುಕೊಂಡಿದ್ದಾರೆ. ಈಗಾಗಲೇ ವಂತಿಗೆ ತುಂಬಿದ ಬೆಳೆ ವಿಮೆ ಪರಿಹಾರದ ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯತೊಡಗಿದ್ದಾರೆ. ಕೆಲವು ರಾಜಕಾರಣಿಗಳ ಬಾಲಂಗೋಚಿ ಹಿಡಿದುಕೊಂಡು ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ ಸರಕಾರಿ ಸ್ವಾಮ್ಯದ ಏಜೆನ್ಸಿಗೆ ಪ್ರಸ್ತಾವನೆಯನ್ನು ಕೂಡಾ ಕಳಿಸಲಾಗಿದೆ ಎನ್ನಲಾಗಿದೆ. ಆದರೆ, ಇಲ್ಲಿ ನಡೆದಿರುವ ಬೃಹನ್ನಾಟಕವನ್ನು ಬಯಲಿಗೆಳೆಯುವ ವಿಡಿಯೋಗಳು ಸಂಬAಧಿಸಿದ ಅಧಿಕಾರಿಗಳ ಬಳಿಯಿವೆ ಎಂದು ಹೇಳಲಾಗುತ್ತದೆ.
ಚಳಿಗಾಲದ ಅಧಿವೇಶನ ಮುಗಿದ ತಕ್ಷಣವೇ ಗದಗ ಜಿಲ್ಲೆಯ ಮಾಜಿ ಶಾಸಕರನ್ನು ಕರೆದುಕೊಂಡು ಬೆಂಗಳೂರಿನಲ್ಲಿ ವ್ಯವಹಾರ ಮುಗಿಸಿ ಕೈತೊಳೆದು ಶುದ್ಧವಾಗುವ ಯೋಜನೆ ಹೂಡಿರುವ ವಂಚಕರಿಗೆ ಸಾವಿರಾರು ರೈತರ ಹಿಡಿಶಾಪ ತಟ್ಟಲಾರದೇ ಬಿಟ್ಟೀತಾ?!
ಮುಂಗಾರು ಹಂಗಾಮಿನ ಬೆಳೆ ವಿಮೆ ತುಂಬಿದ ನಂತರ ತಪಾಸಣೆಗೆ ಬರುವ ತಂಡದ ಮುಂದೆ `ಬೆಳೆ ಹಾಳಾಗಿದೆ’ ಎಂದು ತೋರಿಸಲು ರಾತ್ರೋರಾತ್ರಿ ಹೆಸರು ಕಾಯಿ ಬಿಡಿಸಿರುವ ಕುರಿತು ದಾಖಲೆಗಳು ಸೇರಬೇಕಾದ ಜಾಗ ಸೇರಿವೆ. ಈ ಕಾರಣದಿಂದಲೇ ಇದುವರೆಗೂ ಮುಂಗಾರಿನ ಬೆಳೆ ವಿಮೆ ಹಣ ಬರುತ್ತಿಲ್ಲ. ತಾನೊಂದು ಬಗೆದರೆ ದೈವ ಬೇರೆಯದೇ ದಾರಿ ಹುಡುಕಿತು ಎಂಬಂತಾಗಿದೆ ಈ ವಂಚಕರ ಪರಿಸ್ಥಿತಿ. ಇದೇ ಕಾರಣಕ್ಕಾಗಿ, ರೈತರ ಹೆಸರಿನಲ್ಲಿ ಅಪಾರ ಹಣ ಲೂಟಿ ಹೊಡೆಯುವ ಕನಸು ಕಂಡಿದ್ದ ಮೋಸಗಾರರು ವಿಲವಿಲ ಒದ್ದಾಡುತ್ತಿರುವ ವಿಷಯ ಗುಟ್ಟಾಗಿ ಉಳಿದಿಲ್ಲ.