ಬೆಂಗಳೂರು:- ಜಾತಿಗಣತಿ ವರದಿಗೆ ಅರ್ಥವೇ ಇಲ್ಲ, ಇವೆಲ್ಲಾ ಕುರ್ಚಿ ಉಳಿಸಿಕೊಳ್ಳುವ ನಾಟಕ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ HD ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜಾತಿಗಣತಿ ವರದಿಗೆ ಅರ್ಥವೇ ಇಲ್ಲ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಜಾತಿಗಣತಿ ನಾಟಕ ಮಾಡುತ್ತಿದ್ದಾರೆ. ಕಾಂತರಾಜು ಆಯೋಗದ ವರದಿ ಸಿದ್ಧ ಮಾಡಿ 10 ವರ್ಷಗಳೇ ಕಳೆದಿವೆ. ಜನರಲ್ಲಿ ಗ್ಯಾರಂಟಿ ವೈಫಲ್ಯ, ಭ್ರಷ್ಟಾಚಾರ, ದರ ಏರಿಕೆ ವಿರುದ್ಧ ಆಕ್ರೋಶ ಸ್ಫೋಟವಾಗುವ ಹಂತದಲ್ಲಿದೆ. ಹೀಗಾಗಿ ಜನರ ಗಮನ ಬೇರೆಡೆಗೆ ಸೆಳೆಯಲು ಜಾತಿಗಣತಿ ಡ್ರಾಮಾ ನಡೆಸಿದ್ದಾರೆ ಎಂದು ಕಿಡಿಕಾರಿದರು.
ಇವರು ಜಾತಿಗಣತಿ ಮಾಡಬೇಕಾದರೆ ಹೊಸದಾಗಿ ಸಮೀಕ್ಷೆ ಮಾಡಬೇಕು. ಹೊಸದಾಗಿ ವರದಿ ಕೊಡಬೇಕಾಗುತ್ತದೆ. 10 ವರ್ಷದಲ್ಲಿ ಬಹಳ ಬದಲಾವಣೆ ಆಗಿದೆ. ಈಗ ನೋಡಿದರೆ ಇವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಜಾತಿ-ಜಾತಿ ಮಧ್ಯ ಸಂಘರ್ಷ ತರುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.