ಹಾಸನ: ಹಾಸನದ ಶಕ್ತಿದೇವತೆ, ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ಇಂದು ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ಮುಚ್ಚಲಿದೆ.
ವರ್ಷಕ್ಕೆ ಒಂದೇ ಬಾರಿ ಮಾತ್ರ ದರ್ಶನ ಕೊಡುವ ಹಾಸನಾಂಬೆ ದೇವಿಯನ್ನು ಭಕ್ತರು ಕಣ್ತುಂಬಿಕೊಂಡರು. ಈಗಾಗಲೇ ಹಾಸನಾಂಬ ದೇವಿ ಸಾರ್ವಜನಿಕ ದರ್ಶನ ಅಂತ್ಯಗೊಂಡಿದ್ದು, ಪೂಜೆಗಾಗಿ ಗರ್ಭಗುಡಿ ಬಾಗಿಲು ಮುಚ್ಚಲಾಗಿದೆ. ಮಧ್ಯಾಹ್ನ 12 ಗಂಟೆಗೆ ವಿಶ್ವರೂಪ ದರ್ಶನದ ಬಳಿಕ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಇಂದು ಬೆಳಗ್ಗೆವರೆಗೂ ಹಾಸನಾಂಬ ದೇವಿ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿತ್ತು. ಕಡೆಗಳಿಗೆಯಲ್ಲೂ ಭಕ್ತಗಣ ಹಾಸನಾಂಬ ದೇವಿಯನ್ನು ಕಣ್ತುಂಬಿಕೊಂಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಎಸ್ಪಿ ಮಹಮದ್ ಸುಜಿತಾ, ಎಸಿ ಮಾರುತಿ ಸಮ್ಮುಖದಲ್ಲಿ ಬಾಗಿಲು ಮುಚ್ಚುವ ಕಾರ್ಯ ನಡೆಯುತ್ತದೆ. ಮುಚ್ಚುವ ಮುನ್ನ ಅರ್ಚಕರು ದೀಪ ಹಚ್ಚಿ, ಹೂವು ಹಾಗೂ ನೈವೇದ್ಯವನ್ನು ದೇವಿಯ ಮುಂದೆ ಅರ್ಪಿಸಲಿದ್ದಾರೆ. ಅನಂತರ ಶಾಸ್ತ್ರೋಕ್ತವಾಗಿ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ
ಇನ್ನೂ ಅಕ್ಟೋಬರ್ 9ರಂದು ದೇವಸ್ಥಾನದ ಬಾಗಿಲು ತೆರೆಯಲ್ಪಟ್ಟಿತ್ತು. ಈ ಅವಧಿಯಲ್ಲಿ ಸುಮಾರು 27 ಲಕ್ಷ ಭಕ್ತರು ದರ್ಶನ ಪಡೆದಿದ್ದು, 23 ಕೋಟಿ ರೂಪಾಯಿಗಿಂತ ಹೆಚ್ಚು ಆದಾಯ ಲಾಡು ಪ್ರಸಾದ, ದೇವಿಯ ಸೀರೆ ಮಾರಾಟ ಮತ್ತು ದಾನದಿಂದ ಬಂದಿದ್ದು, ಈ ವರ್ಷದ ಜಾತ್ರಾ ಮಹೋತ್ಸವ ಹೊಸ ಇತಿಹಾಸ ಬರೆದಿದೆ.
ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸೋ ಹಾಸನದ ಅದಿದೇವತೆ ಹಾಸನಾಂಬೆಯ ಮಹಿಮೆ, ಪವಾಡ ಅಪಾರ. ದರ್ಶನಾಂತ್ಯದಲ್ಲಿ ಬಾಗಿಲು ಮುಚ್ಚುವ ವೇಳೆ ಹಚ್ಚಿದ ಮಹಾದೀಪ ನಂದುವುದಿಲ್ಲ. ಹೂವು ಬಾಡಿರುವುದಿಲ್ಲ ಅನ್ನೋ ನಂಬಿಕೆ ಇರುವುದರಿಂದ ಅಮ್ಮನ ಪವಾಡ ಶಕ್ತಿ ಎಲ್ಲಡೆ ಪಸರಿಸಿದೆ. ಇಂತಹ ಶಕ್ತಿದೇವತೆ ಈ ಬಾರಿಯ ದರ್ಶನೋತ್ಸವಕ್ಕೆ ಇಂದು ಶಾಸ್ತ್ರೋಕ್ತವಾಗಿ ತೆರೆ ಬೀಳಲಿದೆ.