ವಿಜಯಸಾಕ್ಷಿ ಸುದ್ದಿ, ಗದಗ: ಭೋಗೋಪಭೋಗ ವಸ್ತುಗಳಲ್ಲಿ ಅತ್ಯಾಸಕ್ತಿಯೇ ಲೋಭವಾಗಿದ್ದು, ಅತಿಯಾಸೆ, ಜಿಪುಣತನ ತೊರೆದು ಉದಾರ ಗುಣಗಳಿಂದ ದಾನ, ಧರ್ಮ, ಪರೋಪಕಾರದೊಂದಿಗೆ ಉತ್ತಮ ಜೀವನ ನಡೆಸುವುದೇ ಶೌಚಧರ್ಮದ ಪಾಲನೆಯಾಗಿದೆ ಎಂದು ಮಂಜುನಾಥ ಬೋಗಾರ ಹೇಳಿದರು.
ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ‘ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ’ ಪ್ರಯುಕ್ತ ರೋಣದ ಪಾರ್ಶ್ವನಾಥ ಬಸದಿಯಲ್ಲಿ ಹಮ್ಮಿಕೊಂಡಿದ್ದ ‘ಉತ್ತಮ ಶೌಚಧರ್ಮ’ ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ನೇಮಿನಾಥ ಮುತ್ತಿನ ಮಾತನಾಡಿ, ಮನುಷ್ಯನು ಅತಿ ಲಾಲಸೆಗಳು, ಭೋಗಭಾಗ್ಯಗಳ ಅಪೇಕ್ಷೆ, ಲೋಭ ಇತ್ಯಾದಿಗಳ ಕಾರಣದಿಂದ ದುಃಖಿಯಾಗಿ ಅಧಃಪತನದತ್ತ ಸಾಗುತ್ತಿದ್ದು, ಲೋಲುಪತೆಯನ್ನು ತ್ಯಾಗ ಮಾಡಿದವನು ಮಾತ್ರ ಅಂತರಂಗದಲ್ಲಿ ಶುಚಿರ್ಭೂತನಾಗುತ್ತಾನೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ, ಕಾರ್ಯದರ್ಶಿ ಪ್ರಕಾಶ ಮುತ್ತಿನ, ಉದ್ಯಮಿ ಅಭಿನಂದನ ಗೋಗಿ ಮತ್ತು ಸ್ಥಳೀಯ ಜೈನ ಸಮಾಜದ ಪದಾಧಿಕಾರಿಗಳು, ಹಿರಿಯರು, ಸುತ್ತಮುತ್ತಲಿನ ಗ್ರಾಮಗಳ ಶ್ರಾವಕರು, ಶ್ರಾವಿಕೆಯರು ಉಪಸ್ಥಿತರಿದ್ದರು.


