Homecultureಹಿರಿಯರು ನಡೆದ ದಾರಿಯಲ್ಲಿ ಸಾಗಿ : ಮುಕ್ತಿಮಂದಿರ ಶ್ರೀಗಳು

ಹಿರಿಯರು ನಡೆದ ದಾರಿಯಲ್ಲಿ ಸಾಗಿ : ಮುಕ್ತಿಮಂದಿರ ಶ್ರೀಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪ್ರಸ್ತುತ ಟಿವಿ, ಮೊಬೈಲ್‌ಗಳ ಪ್ರಭಾವ ಮತ್ತು ಒತ್ತಡದ ಬದುಕಿನಲ್ಲಿರುವ ಜನರಿಗೆ ಧರ್ಮ, ಸಂಸ್ಕೃತಿ, ಆಚರಣೆ, ಸಂಪ್ರದಾಯ, ಸಾಹಿತ್ಯ, ಆಧ್ಯಾತ್ಮದ ಸಂಗ ಕಲ್ಪಿಸುವ ಮೂಲಕ ಸಾತ್ವಿಕ ಸಮಾಜ ನಿರ್ಮಾಣ ಮಾಡುವ ಪುರಾಣ-ಪುಣ್ಯಕಥೆಗಳನ್ನು ಕೇಳಿ ಬದುಕಿನಲ್ಲಿ ಅಳವಡಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.

ಅವರು ಮಂಗಳವಾರ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶ್ರಾವಣ ಮಾಸದುದ್ದಕ್ಕೂ ಶ್ರೀ ಸಿದ್ದೇಶ್ವರ ಸತ್ಸಂಗ ಬಳಗ, ಕದಳಿ ಮಹಿಳಾ ವೇದಿಕೆ, ಶರಣ ಸಾಹಿತ್ಯ ಪರಿಷತ್ತು, ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ, ಅಕ್ಕನ ಬಳಗ, ಪ್ರೇಮಕ್ಕ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ `ಶ್ರಾವಣ ಸಂಜೆ’ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ತಾಂತ್ರಿಕತೆಯ ಪ್ರಭಾವದ ನಡುವೆಯೂ ನಮ್ಮ ಸಂಪ್ರದಾಯ, ಸಂಸ್ಕೃತಿ, ಆಚಾರ-ವಿಚಾರಗಳೊಂದಿಗೆ ಹಿರಿಯರು ನಡೆದು ಬಂದ ದಾರಿಯಲ್ಲಿ ಸಾಗಬೇಕು. ಸುಂದರ ಬದುಕಿಗೆ ಸಂತರ, ಶರಣರ, ಸಾತ್ವಿಕ ಜೀವಿಗಳ ಸತ್ಸಂಗ ಬೇಕು. ಇಂತಹ ಸತ್ಸಂಗ ಕಾರ್ಯಕ್ರಮಗಳು ಜನರ ಮನಸ್ಸನ್ನು ಕಟ್ಟಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸಹಾಯಕಾರಿಯಾಗಿವೆ. ಈ ನಿಟ್ಟಿನಲ್ಲಿ ಪ್ರತಿವರ್ಷ ಶ್ರಾವಣ ಮಾಸದುದ್ದಕ್ಕೂ ಧಾರ್ಮಿಕ, ಸಾಹಿತ್ತಿಕ ಕಾರ್ಯಕ್ರಮ ಮಾಡುವ ಮೂಲಕ ಸಾಮಾಜಿಕ ಬದಲಾವಣೆಗೆ ಶ್ರಮಿಸುತ್ತಿರುವ ಅಕ್ಕನ ಬಳಗದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಮಾತನಾಡಿ, ಶ್ರಾವಣಮಾಸದ ಪುಣ್ಯಕಾಲದಲ್ಲಿ ಅಕ್ಕನ ಬಳಗದವರು ನಡೆಸುವ ಧಾರ್ಮಿಕ, ಸಾಹಿತ್ಯಿಕ ಮತ್ತು ಸಾಮಾಜಿಕ ಕಳಕಳಿಯ ಚಿಂತನಗೋಷ್ಠಿ, ಉಪನ್ಯಾಸ ಕಾರ್ಯಕ್ರಮಗಳು ಸಾಮಾಜಿಕ ಬದಲಾವಣೆಗೆ ಕಾರಣವಾಗಿವೆ. ಸಮಾಜೋಪಯೋಗಿ ಕಾರ್ಯಕ್ರಮಗಳು ಇತರರ ಬದುಕಿಗೆ ಪ್ರೇರಣೆ, ಮಾರ್ಗದರ್ಶನವಾಗಿವೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಲಲಿತಕ್ಕ ಕೆರಿಮನಿ, ಪೂರ್ಣಾಜಿ ಖರಾಟೆ, ಎಸ್.ಸಿ. ಅಳಗವಾಡಿ, ಅಂದಾನೆಪ್ಪ ವಾಲಿಶೆಟ್ಟರ, ಅಶ್ವಿನಿ ಅಂಕಲಕೋಟಿ, ಎಂ.ಬಿ. ಲಿಂಗದಾಳ, ಸರೋಜಾ ಲಿಂಗದಾಳ, ಅನ್ನಕ್ಕ ಯಾಳಗಿ, ಶಿವಯೋಗಿ ಗಾಂಜಿ, ಶರಣಪ್ಪ ಹಸರಡ್ಡಿ, ಎಂ.ಪಿ. ಹುಬ್ಬಳ್ಳಿ, ಮಧುಮತಿ ಹತ್ತಿಕಾಳ, ಅನ್ನಪೂರ್ಣ ಓದುನವರ, ನಿರ್ಮಲಾ ಅರಳಿ, ಪ್ರತಿಮಾ ಮಾಹಾಜನಶೆಟ್ಟರ, ಲತಾ ತಟ್ಟಿ ಸೇರಿ ಹಲವರಿದ್ದರು. ರತ್ನಾ ಕರ್ಕಿ, ಅಂಕಿತಾ ಅರಳಿ, ನಂದಿನಿ ಮಾಳವಾಡ, ಶೋಭಾ ಗಾಂಜಿ ನಿರ್ವಹಿಸಿದರು.

ಸಾಹಿತಿ, ಶಿಕ್ಷಕಿ ಮೈತ್ರಾದೇವಿ ಹಿರೇಮಠ ಅವರು ಸಂಸ್ಕೃತಿ, ಸಂಸ್ಕಾರ, ಸದ್ವಿಚಾರ ವಿಷಯ ಕುರಿತು ಉಪನ್ಯಾಸ ನೀಡಿ, ಮನೆಯೇ ಮೊದಲ ಪಾಠಶಾಲೆ-ತಾಯಿಯೇ ಮೊದಲ ಗುರು ಎಂಬಂತೆ ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಧರ್ಮ ಮಾರ್ಗ, ಸಂಸ್ಕೃತಿ ಮತ್ತು ಉತ್ತಮ ಆಚಾರ-ವಿಚಾರಗಳನ್ನು ಬಿತ್ತಬೇಕು. ಶ್ರಾವಣ ಮಾಸದ ಪುಣ್ಯಕಾಲದಲ್ಲಿ ಪುರಾಣ, ಪುಣ್ಯಕಥೆ, ಪ್ರವಚನ, ಧರ್ಮ ಸಂದೇಶ, ಶರಣ ಆಚಾರ- ವಿಚಾರಗಳನ್ನು ತಿಳಿಯುವುದರಿಂದ ಮನಸ್ಸಿನ ಬೇಗುದಿಗಳು ದೂರವಾಗಿ ಸಂತೃಪ್ತಿ ದೊರಕುತ್ತದೆ. ಈ ನಿಟ್ಟಿನಲ್ಲಿ ವಿವಿಧ ವೇದಿಕೆಗಳ ಮಹಿಳಾ ಬಳಗದವರ ಕಾರ್ಯ ಶ್ಲಾಘನೀಯ ಎಂದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!